

ಹೊಸಪೇಟೆ: ಹಿರೇಹಾಳ್ ಇಬ್ರಾಹಿಂ ಸಾಹೇಬರ ಪುಣ್ಯಸ್ಮರಣೆ ನಿಮಿತ್ತ ಭಾವೈಕ್ಯತಾ ವೇದಿಕೆಯಿಂದ ನಗರದ ಸಿದ್ದಲಿಂಗಪ್ಪ ಚೌಕಿಯ ಸಂತ ಶಿಶುನಾಳ ಷರೀಫ ರಂಗಮಂದಿರದಲ್ಲಿ ಶನಿವಾರ ಪ್ರಸ್ತುತಪಡಿಸಿದ ಗುಡಿಯ ನೋಡಿರಣ್ಣ ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು.
ಈ ನಾಟಕ ಧಾರವಾಡ ಜಿಲ್ಲೆಯ ನವಲಗುಂದದ ನಾಗಲಿಂಗನ ತತ್ವದ ಮಾತುಗಳು ರಂಗದಲ್ಲಿ ಅದ್ಭುತವಾಗಿ ಮೂಡಿಬಂದವು. ಧಾರವಾಡದ ಆಟಮಾಟ ತಂಡದ ರೂವಾರಿಯೂ ಆಗಿರುವ ನಾಟಕ ನಿರ್ದೇಶಕ, ವಿನ್ಯಾಸಕ ಮಹಾದೇವ ಹಡಪದ ಅವರು ನಾಗಲಿಂಗನ ಪಾತ್ರವನ್ನು ಸಮರ್ಥವಾಗಿ, ಲೀಲಾಜಾಲವಾಗಿ ನಿಭಾಯಿಸಿದರು. ಈರಣ್ಣ ಐನಾಪುರ (ಮಡಿವಾಳಪ್ಪ ಪಾತ್ರ), ಗಾಯತ್ರಿ ಹೆಗ್ಗೋಡು (ಭೀಮವ್ವ ಪಾತ್ರ) ಹಾಗೂ ಮಂಜುನಾಥ ಬಗಲಿ (ಶಿಶುನಾಳ ಷರೀಫ) ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದರು. ಜಾತಿ, ಧರ್ಮವ ಮೀರಿ ಬನ್ನಿ, ಮನುಷ್ಯತ್ವದ ಕಡೆಗೆ ಕರೆದೊಯ್ಯುವುದೇ ಆಧ್ಯಾತ್ಮ ಎಂಬ ನೀತಿಯನ್ನು ಈ ನಾಟಕ ಬೋಧಿಸಿತು. ನಾಟಕಕ್ಕೆ ರಂಗಪಠ್ಯ ಒದಗಿಸಿದವರು ರಾಜಕುಮಾರ ಮಡಿವಾಳರ. ಬೆಳಕಿನಲ್ಲಿ ಸಂಗಮೇಶ್ ಸೋರಗಾಂವಿ, ತಬಲಾದಲ್ಲಿ ಫಕೀರಪ್ಪ ಕೋರಿ, ವೀರೇಶ್ ಹಿರೇಮಠ್ ಸಹಕರಿಸಿದರು.
ಸಾಹಿತ್ಯ ಚಿಂತಕ ಪ್ರೊ.ಮೃತ್ಯುಂಜಯ ರುಮಾಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹೊಸಪೇಟೆ ಆಕಾಶವಾಣಿ ಕೇಂದ್ರದ ಇಒ ಎಂ.ಎಸ್.ನಾಗೇಂದ್ರ, ಭಾವೈಕ್ಯತಾ ವೇದಿಕೆ ಟ್ರಸ್ಟ್ ಅಧ್ಯಕ್ಷ ಪಿ.ಅಬ್ದುಲ್, ಪಿಂಜಾರ ಸಂಘದ ಅಧ್ಯಕ್ಷ ಜಲೀಲ್ ಸಾಹೇಬ, ಎಚ್‌ಪಿ ಫೌಂಡೇಶನ್‌ನ ಅಧ್ಯಕ್ಷ ದಾದಖಲಂದರ್ ಇತರರಿದ್ದರು.