ನೆಲದ ಕಾನೂನಿನಂತೇ ದತ್ತು ಪಡೆಯಲಿ

28 MANJU 01
Published on

ಹೊಸಪೇಟೆ: ಈ ನೆಲದ ಕಾನೂನಿನಂತೇ ಮಕ್ಕಳನ್ನು ದತ್ತು ಪಡೆಯಬೇಕು. ಈ ಹಿಂದೆ ಪಡೆಯುತ್ತಿದ್ದ ಸಾಂಪ್ರದಾಯಿಕ ದತ್ತು ಪಡೆಯುವುದನ್ನು ಕೈಬಿಟ್ಟು, ಕಾನೂನು ಪ್ರಕಾರವೇ ದತ್ತು ಪಡೆಯಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣ ಘಟಕದ ಪಿಒಎನ್‌ಐಸಿ ಶರಣಪ್ಪ ಹೇಳಿದರು.

ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ನಿಮಿತ್ತ ನಗರದ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ಕಾನೂನು ಬದ್ಧ ದತ್ತು ಹಾಗೂ ದತ್ತು ಪ್ರಕ್ರಿಯೆ, ದತ್ತುವಿನ ಮಾನದಂಡಗಳ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲರೂ ಕಾನೂನುಬದ್ಧ ದತ್ತು ಪ್ರಕ್ರಿಯೆ ಕುರಿತು ಅರಿತುಕೊಳ್ಳಬೇಕು ಎಂದರು.

ಸರ್ಕಾರಿ ವಿಶೇಷ ದತ್ತು ಕೇಂದ್ರದ ಜಿಲ್ಲಾ ಸಂಯೋಜಕಿ ವಿದ್ಯಾಬಾಯಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು. ಕುಟುಂಬದಲ್ಲಿನ ದತ್ತು ಪಡೆಯುವುದಕ್ಕೆ ಸರ್ಕಾರದ ಯಾವುದೇ ಮಾನ್ಯತೆ ಇಲ್ಲ. ಕಾನೂನಿನಲ್ಲೂ ಇದಕ್ಕೆ ಮಾನ್ಯತೆ ಇಲ್ಲದಾಗಿದೆ. ಹಾಗಾಗಿ ಸರ್ಕಾರ ರೂಪಿಸಿರುವ ಕಾನೂನಿನ ಅನ್ವಯವೇ ದತ್ತು ಪಡೆಯಬೇಕು. ಈ ದತ್ತು ಪ್ರಕ್ರಿಯೆಯಲ್ಲಿ ದತ್ತು ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಪ್ರತಿಯೊಂದು ಮಾಹಿತಿ ಬೆಂಗಳೂರು ಹಾಗೂ ಹೊಸದಿಲ್ಲಿ ಮುಖ್ಯ ಕಚೇರಿಗಳ ಗಮನಕ್ಕೆ ತರಲಾಗುವುದು. ಸರ್ಕಾರಿ ನಿಯಮಾವಳಿ ಮಾನದಂಡದ ಅನ್ವಯವೇ ದತ್ತು ಪ್ರಕ್ರಿಯೆ ನಡೆಸಲಾಗುತ್ತದೆ ಎಂದರು.

ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಷಣ್ಮುಖ ಮಾತನಾಡಿ, ಬಾಲ್ಯವಿವಾಹ, ಬಾಲಕಾರ್ಮಿಕ ಸೇರಿದಂತೆ ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಬೇಕು. ಇದರಿಂದ ಮಕ್ಕಳಿಗೆ ತಕ್ಷಣವೇ ನೆರವು ದೊರೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net