ಸಹಕಾರ ರಂಗಕ್ಕೆ ಬಲಹೀನಗೊಳಿಸಲು ಸರ್ಕಾರ ಯತ್ನ

news
ಬಿಜೆಪಿಯ ಸಹಕಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಓಂಕಾರಗೌಡ
Published on

ಹೊಸಪೇಟೆ: ರಾಜ್ಯ ಸರ್ಕಾರ ಸಹಕಾರ ರಂಗದಲ್ಲೂ ರಾಜಕೀಯ ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡಲು ಹೊರಟುತ್ತಿರುವುದು ಸರಿಯಲ್ಲ. ಇದರಿಂದ ಸಹಕಾರ ರಂಗಕ್ಕೆ ಪೆಟ್ಟು ಬೀಳಲಿದೆ ಎಂದು ಬಿಜೆಪಿಯ ಸಹಕಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಓಂಕಾರಗೌಡ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಕಾರ ಕ್ಷೇತ್ರದಲ್ಲಿ ನಾಮ ನಿರ್ದೇಶನ ಮಾಡಲು ಹೊರಟಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ)ಗಳಿಗೂ ತಲಾ ಮೂವರನ್ನು ಸರ್ಕಾರ ನಾಮ ನಿರ್ದೇಶನ ಮಾಡಲು ಹೊರಟಿದೆ. ಜತೆಗೆ ಅವರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೂ ಸ್ಪರ್ಧೆ ಮಾಡಲು ಅವಕಾಶ ನೀಡಲಾಗುತ್ತಿದೆ. ಇದರಿಂದ ಸಹಕಾರ ಕ್ಷೇತ್ರದ ಮೇಲೂ ಸರ್ಕಾರ ಹಿಡಿತ ಸಾಧಿಸಲು ಹೊರಟಿದೆ. ಹಿತ್ತಲ ಬಾಗಿಲಿನ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಸಹಕಾರ ಕ್ಷೇತ್ರದಲ್ಲಿ ನೇಮಕ ಮಾಡಿ ರಾಜಕೀಯಗೊಳಿಸಲು ಸರ್ಕಾರ ಹೊರಟಿದೆ. ಸಹಕಾರ ಕ್ಷೇತ್ರದ ಬಲವರ್ಧನೆಗೆ ಆದ್ಯತೆ ನೀಡಬೇಕಾದ ಸರ್ಕಾರ, ಈ ಕ್ಷೇತ್ರವನ್ನು ಬಲಹೀನಗೊಳಿಸಲು ಹೊರಟಿದೆ ಎಂದು ದೂರಿದರು.

ದೇಶದಲ್ಲಿ ಸಹಕಾರ ಚಳವಳಿ ಬಲಪಡಿಸುವಿಕೆ, ತಳಮಟ್ಟದ ವರೆಗೆ ಅದರ ವ್ಯಾಪ್ತಿ ಹೆಚ್ಚಿಸುವುದು, ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಸೇರಿದಂತೆ ಸಹಕಾರ ಕ್ಷೇತ್ರದ ಬಲವರ್ಧನೆಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಸಹಕಾರ ಕ್ಷೇತ್ರವನ್ನು ಶ್ರಮಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರ ಸಹಕಾರಿಗಳ ಹಾಗೂ ಸಹಕಾರ ಸಂಘಗಳ ಹಿತಾಸಕ್ತಿ ವಿರುದ್ಧವಾಗಿ ಕಾನೂನು ತರಲು ಹೊರಟಿದೆ. ಇದು ಕರ್ನಾಟಕದ ಎಲ್ಲ ಸಹಕಾರಿಗಳಿಗೆ ಆಘಾತವನ್ನು ಉಂಟು ಮಾಡಿದೆ ಎಂದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ಪ್ರಮುಖರಾದ ಅಶೋಕ್ ಜೀರೆ, ಮಲ್ಲಿಕಾರ್ಜುನ, ಬಸವರಾಜ ಕರ್ಕಿಹಳ್ಳಿ, ವೆಂಕಟೇಶ ನಾಯಕ, ಅನುರಾಧಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net