ಸರ್ಕಾರ ಗೋಡೆಬರಹ, ಚಿತ್ರ ಕಲಾವಿದರ ಗುರುತಿಸಲಿ: ಸಂಘದ ಅಧ್ಯಕ್ಷ ವೈ.ಎಚ್.ಪರಶುರಾಮ್ ಒತ್ತಾಯ

13112021 Hosapete Inauguration of Karnataka Artists Association
Published on


ಹೊಸಪೇಟೆ ಗೋಡೆಬರಹ, ಚಿತ್ರ ಕಲಾವಿದರನ್ನು ಸರ್ಕಾರ ಗುರುತಿಸಿ, ಸೌಕರ್ಯ ನೀಡಲು ಮುಂದಾಗಬೇಕು ಎಂದು ಅಖಿಲ ಕರ್ನಾಟಕ ಚಿತ್ರಕಲಾವಿದರ ಸಂಘದ ಅಧ್ಯಕ್ಷ ವೈ.ಎಚ್.ಪರಶುರಾಮ್ ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಖಿಲ ಕರ್ನಾಟಕ ಚಿತ್ರಕಲಾವಿದರ ಸಂಘ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಮಾಣ ಪತ್ರ ಬದಲಿಗೆ ಕಲಾವಿದನ ಪ್ರತಿಭೆ ಗುರುತಿಸಿ ಗೌರವಿಸಬೇಕು. ಅನಕ್ಷರಸ್ಥ ಕಲಾವಿದರು ಅಪಾರ ಪ್ರತಿಭೆ ಹೊಂದಿದ್ದು, ಅವರನ್ನು ಗುರುತಿಸುವ ಕಾರ್ಯವಾಗಬೇಕು. ಆಗ ಅವರಿಗೂ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಪ್ರಮಾಣ ಪತ್ರವಿಲ್ಲವೆಂಬ ಕಾರಣಕ್ಕೆ ಸರ್ಕಾರದಿಂದ ನೀಡಲಾದ ಕೋವಿಡ್ ಪರಿಹಾರವನ್ನೂ ಪಡೆಯಲು ಸಾಧ್ಯವಾಗಿಲ್ಲ. ಅಸಂಘಟಿತ ಚಿತ್ರಕಲಾವಿದರು ಒಂದಾಗಿ ಪ್ರತಿಭೆಯೊಂದಿಗೆ ಗುರುತಿಸಿಕೊಳ್ಳಲು ಮುಂದಾಗಬೇಕಾಗಿದ್ದು, ಇದಕ್ಕೆ ಸಂಘ ವೇದಿಕೆಯಾಗಲಿದೆ ಎಂದರು.

ಸಂಘದ ನಿರ್ದೇಶಕಿ ರಂಜಾನ್‌ಬೀ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ಕಲಾವಿದರು ತುಂಬ ಸಮಸ್ಯೆ ಎದುರಿಸಬೇಕಾಯಿತು. ಸದ್ಯ ಕಲಾವಿದರ ಬದುಕು ಕೊಂಚ ಸುಧಾರಿಸಿದೆ. ಅಸಂಘಟಿತ ಕಾರ್ಮಿಕರಿಗೆ ನೀಡಿದಂತೆ ಚಿತ್ರಕಲಾವಿದರಿಗೂ ಮಾನ್ಯತೆ ನೀಡಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು. ಸಂಘದ ಗೌರವಾಧ್ಯಕ್ಷ ಎ.ನೀಲಪ್ಪ, ಉಪಾಧ್ಯಕ್ಷ ಮುನಿಕುಮಾರ, ಖಜಾಂಚಿ ಟಿ.ಎಸ್. ಚಂದ್ರಶೇಖರ್, ನಿರ್ದೇಶಕರಾದ ಸುಬ್ಬರಾಯ್ಡು, ಪುಷ್ಪಾರಾಜ, ಜ್ಯೋತಿ ಇದ್ದರು. ಕೆ.ಎಂ.ಸತೋಷ್ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net