

ಹೊಸಪೇಟೆ: ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಗಿಂಕ ಕಿರುಕುಳದಂತಹ ಕೃತ್ಯಗಳನ್ನು ತಡೆಗಟ್ಟಿ, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅ.11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಿಸಲಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮಾನ ಎ.ನಂದಗಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೂರನೇ ಅಪರ ಸಿವಿಲ್ ನ್ಯಾಯಾಧೀಶೆ ಜೆ.ಚೈತ್ರ ಮಾತನಾಡಿ, ವಿಶ್ವದಾದ್ಯಂತ ಹೆಣ್ಣು ಮಕ್ಕಳು ಎದುರಿಸುತ್ತಿರುವ ವರದಕ್ಷಿಣೆ ಕಿರುಕುಳ, ಭೇದಭಾವ ಮತ್ತು ಬಾಲ್ಯವಿವಾಹ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ, ಸಾಮಾಜಿಕ ಪಿಡುಗು ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಎಂಬುದೆ ಇದರ ಉದ್ದೇಶವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರಭುಗೌಡ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ ಹೆಣ್ಣು ಮಕ್ಕಳು ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ.
ಹೆಣ್ಣು ಕುಟುಂಬ ಸದಸ್ಯರ ಜವಾಬ್ದಾರಿಯ ಜತೆಗೆ ಸಮಾಜ ಸೇವೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಹೆಣ್ಣು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಬೀತು ಪಡಿಸಿದ್ದಾಳೆ ಎಂದರು.
ನ್ಯಾಯಾಧೀಶರಾದ ರಮೇಶ್ ಬಾಬು ಬಿ.ಎನ್., ಅಶೋಕ ಆರ್.ಎಚ್., ಸಂಜಿವ್ ಕುಮಾರ ಜಿ., ಕಾಲೇಜಿನ ಅಧ್ಯಕ್ಷ ಮೆಟ್ರಿ ಮಲ್ಲಿಕಾರ್ಜುನ, ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸಮೂರ್ತಿ, ಕಾಲೇಜಿನ ಉಪನ್ಯಾಸಕರಾದ ಹೂವಕ್ಕ ಬಿ.ಎಸ್, ಭಾರತಿ, ಟಿ.ಎಚ್.ಎಂ.ಜಯಶ್ರೀ ಇತರರಿದ್ದರು.