

ಹೊಸಪೇಟೆ: ಕೆಕೆಆರ್ಡಿಬಿ ಅನುದಾನ ಹಂಚಿಕೆಯಲ್ಲಿ ವಿಜಯನಗರ ಕ್ಷೇತ್ರಕ್ಕೆ ಭಾರೀ ಅನ್ಯಾಯ ಆಗಿದೆ ಎಂದು ಕಾಂಗ್ರೆಸ್ ಶಾಸಕ ಎಚ್.ಆರ್.ಗವಿಯಪ್ಪ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಬಿಜೆಪಿ ಮಾಜಿ ಶಾಸಕರು ತಂದ ಅನುದಾನದಲ್ಲಿಯೇ ಒಂದೂವರೇ ವರ್ಷ ಕೆಲಸ ನಡೆಯುತಿದೆ. ಈಗಲಾದರೂ ನಮಗೆ ಕೆಲಸ ಮಾಡೋಕೆ ಅನುದಾನ ಬೇಕಲ್ವಾ? ಕ್ಷೇತ್ರದ ಜನ ಕೇಳ್ತಿದ್ದಾರೆ. ಅನುದಾನವಿಲ್ಲದೇ ನಾನೇನು ಮಾಡಲಿ? ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕೆಕೆಆರ್ಡಿಬಿಯಿಂದ ನೂತನ ವಿಜಯನಗರ ಜಿಲ್ಲೆಗೆ ಒಟ್ಟು 348 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಿಗೆ 60 ರಿಂದ 70 ಕೋಟಿ ರೂ. ಅನುದಾನ ನೀಡಿದ್ದಾರೆ. ವಿಜಯನಗರ ಕ್ಷೇತ್ರಕ್ಕೆ ಕೇವಲ 22 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ 12 ಕೋಟಿ ರೂ. ಅನುದಾನ ನೀಡಿದ್ದೇನೆ. ಇನ್ನುಳಿದ 8 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದಲ್ಲಿ ಏನು ಕೆಲಸ ಮಾಡೋಕಾಗುತ್ತೆ? ಜನರು ನನ್ನನ್ನ ಕೇಳ್ತಿದ್ದಾರೆ, ನಾನೇನು ಮಾಡಲಿ ಎಂದು ಅಸಮಧಾನ ತೋಡಿಕೊಂಡಿದ್ದಾರೆ.
ಜಿಲ್ಲೆಗೆ ಬರುವ ಅನುದಾನದಲ್ಲಿ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಉಸ್ತುವಾರಿ ಸಚಿವರು ಶೇ. 25 ರಷ್ಟು ಅನುದಾನ ಮೀಸಲಿಡಬೇಕು. ಅದು ಜಿಲ್ಲಾ ಉಸ್ತುವಾರಿ ಸಚಿವರ ಕೈಯಲ್ಲಿ ಇರುತ್ತೆ. ನಮ್ಮ ಜಿಲ್ಲಾ ಉಸ್ತುವಾರಿ ಜಮೀರ್ ಅಹ್ಮದ್ ಅವರು ಅದನ್ನು ಮಾಡಿಲ್ಲಾ. ಬೇಕಾದರೆ ಅವರೆ ವಿವೇಚನೆಗೆ ಬಂದಹಾಗೇ ಜಿಲ್ಲಾ ಉಸ್ತುವಾರಿ ಸಚಿವರೆ ಅನುದಾನ ಬಳಸಲಿ. ನಾನೇನು ಕೇಳಲ್ಲ, ನನ್ನ ಹಸ್ತಕ್ಷೇಪ ಕೂಡ ಆಗಲ್ಲ ಎಂದರು.