

ಹೊಸಪೇಟೆ: ರಾಜ್ಯ ಸರ್ಕಾರದ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿರುವ ಜನಗಣತಿ ಸಮೀಕ್ಷೆಯಲ್ಲಿ ಗಾಣಿಗ ಸಮಾಜದವರು ಧರ್ಮ ಕಲಂನಲ್ಲಿ 'ಹಿಂದೂ', ಜಾತಿ ಕಾಲಂನಲ್ಲಿ 'ಗಾಣಿಗ' ಎಂದು ನಮೂದಿಸುವಂತೆ ಅಖಿಲ ಭಾರತ ಗಾಣಿಗರ ಸಂಘದ ರಾಜ್ಯ ಗೌರವಧ್ಯಕ್ಷ ಡಾ.ಶೇಖರ ಸಜ್ಜನ್ ಕರೆ ನೀಡಿದರು.
ನಗರದ ರೋಟರಿ ಕ್ಲಬ್ ನಲ್ಲಿ ಅಖಿಲ ಭಾರತ ಗಾಣಿಗರ ಸಂಘದಿಂದ ಜಾತಿ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕುರಿತು ವಿಜಯನಗರ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಗಾಣಿಗರ ಸಂಘದ ಪದಾಧಿಕಾರಿಗಳ ಜಾಗೃತಿ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದರು.
ಸೆ.22 ರಿಂದ ಜನಗಣತಿ ಸಮೀಕ್ಷೆ ನಡೆಯುತ್ತಿದ್ದು, ರಾಜ್ಯ ಮಟ್ಟದಲ್ಲಿ ಬೆಂಗಳೂರಿನಲ್ಲಿ ಅಖಿಲ ಭಾರತ ಗಾಣಿಗರ ಸಂಘ ಕರ್ನಾಟಕ ರಾಜ್ಯ ಸಮಿತಿ ತೀರ್ಮಾನದಂತೆ ಪ್ರತಿ ಮೂರು ಜಿಲ್ಲೆಗಳಿಗೆ ಒಂದರಂತೆ ಸಭೆ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಗಾಣಿಗ ಸಮಾಜದ ಜಿಲ್ಲಾ ಅಧ್ಯಕ್ಷರು, ತಾಲೂಕು ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಸಮಾಜದ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಪ್ರತಿ ಹಳ್ಳಿಗಳ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ಕುರಿತು ಮಾಹಿತಿ ನೀಡಬೇಕು. ಸಮೀಕ್ಷೆಯ ಜಾತಿ ಕೋಡ್ ಸಂಖ್ಯೆ 346 ಇದ್ದು, ಇದರಲ್ಲಿ ಧರ್ಮ ಕಲಂನ ಲ್ಲಿ ʼಹಿಂದೂʼ, ಜಾತಿ ಕಾಲಂನಲ್ಲಿ ʼಗಾಣಿಗʼ ಎಂದೇ ನಮೂದಿಸಲು ಜಾಗೃತಿ ಮೂಡಿಸಬೇಕು ಎಂದರು.
ಅಖಿಲ ಭಾರತ ಗಾಣಿಗರ ಸಂಘಟನೆ ರಾಜ್ಯ ಉಪಾಧ್ಯಕ್ಷ ಸಂಗನಗೌಡ ಪಾಟೀಲ್, ಕಾರ್ಯದರ್ಶಿಗಳಾದ ಶರಣಪ್ಪ ನಾಗೋಜಿ, ವೀರಣ್ಣ ಗಾಣಿಗೇರ, ವಿಜಯನಗರ ಜಿಲ್ಲಾ ಅಧ್ಯಕ್ಷ ಜಿ.ಉಮೇಶ್, ಬಳ್ಳಾರಿ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಪ್ಪ, ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ತೋಟಪ್ಪ ಕಾಮನೂರು, ಪ್ರಮುಖರಾದ ರುದ್ರಮುನಿ ಗಾಳಿ, ವೀರೇಶಪ್ಪ ಸಂಡೂರು, ಎ.ಚಿದಾನಂದಗೌಡ ಸಿರಗುಪ್ಪ, ಅಂಗಡಿ ತಿಪ್ಪೇಶ, ಶಂಕರಗೌಡ ಪಾಟೀಲ್, ಶರಣಪ್ಪ ವಣೀಗೇರಿ, ಶಿವಪುತ್ರಪ್ಪ ಕುದ್ರಿಕೊಟಗಿ, ಶ್ರೀದೇವಿ ನಾಗರಾಜ ಇತರರಿದ್ದರು.