ಮಹಿಳೆಯಿಂದಲೇ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ

28 MANJU 02
Published on

ಹೊಸಪೇಟೆ: ನಮ್ಮ ಆಸೆಗಳನ್ನು ಮಿತಿಯಲ್ಲಿಟ್ಟರೆ ದುರಾಸೆ ಮೂಡುವುದು ಸಾಧ್ಯವಿಲ್ಲ. ಈ ಕೆಲಸವನ್ನು ಮಹಿಳೆ ಸಮರ್ಥವಾಗಿ ಮಾಡಬಹುದಾಗಿದ್ದು, ಆ ಮೂಲಕ ಭ್ರಷ್ಟಾಚಾರ ನಿಯಂತ್ರಣಕ್ಕೆ ತರಲು ಆಕೆಗೆ ಸಾಧ್ಯವಿದೆ ಎಂದು ಯೋಗ ಸಾಧಕಿ ಉಮಾ ವಿಶ್ವನಾಥ ಹೇಳಿದರು.

ಪತಂಜಲಿ ಯೋಗ ಸಮಿತಿ, ಯೋಗ ಸ್ನೇಹ ಬಳಗದಿಂದ ಶುಕ್ರವಾರ ಇಲ್ಲಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಅತಿಯಾದ ಆಸೆ ಆರಂಭವಾಗುವುದೇ ಮನೆಯಿಂದ. ಮನೆಯೊಡತಿ ಈ ಆಸೆಗೆ ನಿಯಂತ್ರಣ ಹೇರಿದಾಗ ಇಡೀ ಮನೆಯ ವಾತಾವರಣವೇ ಬದಲಾಗಿಬಿಡುತ್ತದೆ. ಅಲ್ಲಿ ಕೊಳ್ಳುಬಾಕ ಸಂಸ್ಕೃತಿ ನಿಯಂತ್ರಣದಲ್ಲಿರುತ್ತದೆ. ಇದು ಪರೋಕ್ಷವಾಗಿ ಭ್ರಷ್ಟಾಚಾರ ನಿಯಂತ್ರಣಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಮಹಿಳೆ ಸಮಾಜದ ದೊಡ್ಡ ಪಿಡುಗನ್ನು ನಿವಾರಿಸುವ ನಿಟ್ಟಿನಲ್ಲಿ ಬಹುದೊಡ್ಡ ಪಾತ್ರ ವಹಿಸುವುದು ಸಾಧ್ಯವಿದೆ. ಮಹಿಳೆಯರು ಹೆಚ್ಚಾಗಿ ಯೋಗ, ಪ್ರಾಣಾಯಾಮದಲ್ಲಿ ತೊಡಗಿಸಿಕೊಂಡು ತಮ್ಮ ದೈಹಿಕ, ಮಾನಸಿಕ ಕಾಯಿಲೆಗಳನ್ನು ದೂರ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆಯ ವಿದ್ಯುತ್ ಎಂಜಿನಿಯರ್ ಸುಶೀಲಾ ಮಧುಕರ್ ಮಾತನಾಡಿ, ಮಹಿಳೆ ರಕ್ಷಣಾ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ್ದಾಳೆ. ಕಷ್ಟ ಬಂದಾಗ ಸಂಹರಿಸುವ ದೇವಿ ಅವತಾರವನ್ನು ತಾಳುವುದೂ ಆಕೆಗೆ ಸಾಧ್ಯವಿದೆ. ಹೀಗಾಗಿ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಯತ್ನಿಸುತ್ತಲೇ ಸಮಾಜದಲ್ಲಿನ ತಮ್ಮ ಹೊಣೆಯನ್ನೂ ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪತ್ರಕರ್ತೆ ರೇಖಾ ಪ್ರಕಾಶ್, ಪತಂಜಲಿ ಯೋಗ ಸಮಿತಿಯ ಜಿಲ್ಲಾ ಮಹಿಳಾ ಪ್ರಭಾರಿ ಮಂಗಳಮ್ಮ, ವೈದ್ಯೆ ಡಾ.ಎ.ಸುಮಂಗಲಾದೇವಿ, ಕೇಂದ್ರದ ಸಂಚಾಲಕ ಶ್ರೀರಾಮ, ಫ್ರೀಡಂ ಪಾರ್ಕ್ ಯೋಗ ಕೇಂದ್ರದ ಮುಖ್ಯಸ್ಥ ಅನಂತ ಜೋಷಿ, ಪ್ರಮುಖರಾದ ಶೈಲಜಾ ಕಳಕಪ್ಪ, ಶೋಭಾ, ನೇತ್ರಾವತಿ, ಚೆನ್ನಮ್ಮ ಅರ್ಚನಾ, ಗೌರಮ್ಮ, ರಾಜಶೇಖರ, ಪಾಂಡುರAಗ, ವೀರಣ್ಣ ಪಾಲ್ಗೊಂಡಿದ್ದರು. ಶಿವಶಂಕರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net