ಬೆಂಗಳೂರಿನಲ್ಲಿ ಉಚಿತ ಸಾಮೂಹಿಕ ವಿವಾಹ

26 MANJU 02
Published on

ಹೊಸಪೇಟೆ: ಶ್ರೀ ಮಡಿವಾಳ ಮಾಚಿ ದೇವರ ಜಯಂತೋತ್ಸವದ ನಿಮಿತ್ತ ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಏ.14 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಆರ್.ಮಂಜುನಾಥ ತಿಳಿಸಿದ್ದಾರೆ.

ನಗರದ ಪತ್ರಿಕಾಭವನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ ಸಮುದಾಯದ ಶ್ರೇಯೋಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದಿಚುಂಜನಗಿರಿ ಮಠದ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ ಜಯಂತೋತ್ಸವ ಉದ್ಘಾಟಿಸಲಿದ್ದಾರೆ. ಮೂಡಬಿದಿರೆಯ ಶ್ರೀಕ್ಷೇತ್ರ ಸಮಾಜದ ಮುಕ್ತಾನಂದ ಸ್ವಾಮೀಜಿ, ಚಿತ್ರದುರ್ಗದ ಬಸವ ಮಾಚಿ ದೇವ ಸ್ವಾಮೀಜಿ, ರೈಲ್ವೆ ಸಚಿವ ವಿ.ಸೋಮಣ್ಣ ಮತ್ತಿತರೆ ಗಣ್ಯರು ಭಾಗವಹಿಸಲಿದ್ದಾರೆ.

ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ ಮಾತನಾಡಿ, ಮಡಿವಾಳ ಸಮುದಾಯದವರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಡಾ.ಅನ್ನಪೂರ್ಣ ಅವರ ವರದಿ ಜಾರಿಗೆ ತರಬೇಕು. ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬಗ್ಗೆ ಅಧ್ಯಯನ ನಡೆಸಲು ಬಿಎಸ್‌ವೈ ನೇತೃತ್ವದ ಹಿಂದಿನ ಸರ್ಕಾರ ಮೈಸೂರು ವಿವಿಯ ಪ್ರಾಧ್ಯಾಪಕಿ ಡಾ.ಅನ್ನಪೂರ್ಣ ಅವರನ್ನು ನೇಮಿಸಿತ್ತು. ಅವರು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ವರದಿ ಸಚಿವ ಸಂಪುಟದ ಮುಂದೆ ಇದೆ. ಅದಕ್ಕೆ ಒಪ್ಪಿಗೆ ನೀಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ರಾಜ್ಯದಲ್ಲಿ ಮಡಿವಾಳ ಸಮುದಾಯದವರು 25 ಲಕ್ಷ ಜನ ಇದ್ದಾರೆ. ಮಡಿವಾಳರ ಸ್ಥಿತಿ ಶೋಚನೀಯವಾಗಿದೆ. ಸಮುದಾಯದವರಲ್ಲಿ ಒಗ್ಗಟ್ಟು ಸಹ ಇಲ್ಲ. 27 ರಾಜ್ಯಗಳಲ್ಲಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ರಾಜ್ಯದಲ್ಲೂ ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಬಿ.ಆರ್.ಪ್ರಕಾಶ್, ವೆಂಕಟರಾಮಯ್ಯ, ವೆಂಕೋಬಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net