

ಹಿಂದಿನಂತೆ ಸೇನಾ ಭರ್ತಿ ಪ್ರಕ್ರಿಯೆಗೆ ಆಗ್ರಹ
ಹೊಸಪೇಟೆ: ಕೇಂದ್ರ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಅಗ್ನಿಪಥ ಯೋಜನೆ ಜಾರಿಗೊಳಿಸಿ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಹುನ್ನಾರ ನಡೆಸಿದ್ದು, ಯಾವುದೇ ಸ್ಪಷ್ಟತೆ ಇಲ್ಲದ ಅಗ್ನಿಪಥ ಯೋಜನೆ ದೇಶಕ್ಕೆ ಮಾರಕವಾಗಲಿದೆ. ತಕ್ಷಣ ಅದನ್ನು ಕೈಬಿಟ್ಟು, ಎಂದಿನಂತೆ ಸೇನಾ ನೇಮಕವನ್ನು ಮುಂದುವರಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.
ದೇಶದಲ್ಲಿ ಭ್ರಷ್ಟಾಚಾರ, ನಿಯಂತ್ರಣ, ಕಪ್ಪು ಹಣ ವಾಪಸ್ ತರುವ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಅದ್ಯಾವುದನ್ನೂ ಈಡೇರಿಸಿಲ್ಲ. ಕೇಂದ್ರ ಮತ್ತು ಹಲವು ರಾಜ್ಯಗಳಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಅಧಿಕಾರದಲ್ಲಿದ್ದರೂ, ದೇಶದಲ್ಲಿ ಬಡತನ, ನಿರುದ್ಯೋಗದ ಸಮಸ್ಯೆ ತಾಂಡವಾಡುತ್ತಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯಾಗುವ ಬದಲಿಗೆ 13 ಕೋಟಿ ಉದ್ಯೋಗ ನಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರಿವೆ. ದೇಶದ ಭದ್ರತೆಯಲ್ಲಿ ಅಭದ್ರತೆ ಕಾಡುತ್ತಿದೆ. ಇದರಿಂದ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗುತ್ತಿದ್ದರಿಂದ ಹೊಸದೊಂದು ಯೋಜನೆ ನೆಪದಲ್ಲಿ ಯುವಜನರ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಅಗ್ನಿಪಥ ಯೋಜನೆಯಡಿ 17 ವರ್ಷದವರನ್ನು ನೇಮಿಸಿಕೊಳ್ಳಲಿದ್ದು, 21ವರ್ಷಕ್ಕೆ ಅವರ ಸೇವಾ ಅವಧಿ ಪೂರ್ಣಗೊಳ್ಳಲಿದೆ. ಇದರಿಂದ ಅವರ ಪ್ರೌಢ ಶಿಕ್ಷಣವೂ ಪೂರ್ಣಗೊಳ್ಳುವುದಿಲ್ಲ. ಸೇವಾ ಮುಕ್ತಾಯದ ಸಮಯದಲ್ಲಿ ಹೆಚ್ಚಿನ ಗ್ರಾಚ್ಯುಟಿ, ನಿವೃತ್ತ ವೇತನ ದೊರೆಯುವುದಿಲ್ಲ. ಅವರಲ್ಲಿ ಓದುವ ಆಸಕ್ತಿಯೂ ಕಡಿಮೆಯಾಗಿ, ಅತಂತ್ರ ಸ್ಥಿತಿಗೆ ಸಿಲುಕುತ್ತಾರೆ. ಅಲ್ಲದೆ, ಅಗ್ನಿಪಥದಲ್ಲಿ ನೇಮಕಗೊಳ್ಳುವವರಲ್ಲಿ ಶೇ.10 ಜನರನ್ನು ಮಾತ್ರ ಸೇನೆಯಲ್ಲಿ ಮುಂದುವರಿಸಿದರೆ, ಉಳಿದವರ ಪಾಡೇನು ಎಂದು ಕಳವಳ ವ್ಯಕ್ತಪಡಿಸಿದರು.
ಜಗತ್ತಿನ ನಾನಾ ದೇಶಗಳಲ್ಲಿ ನಾಗರಿಕರಿಗೆ ಸೇನಾ ತರಬೇತಿ ಕಡ್ಡಾಯವಾಗಿದ್ದರೂ, ಅದು ಶಿಕ್ಷಣದ ಭಾಗವಾಗಿದೆ. ನಮ್ಮಲ್ಲೂ ಎನ್‌ಸಿಸಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಅಗ್ನಿಪಥ ಯೋಜನೆಯನ್ನು ಉದ್ಯೋಗ ಎಂದು ಬಿಂಬಿಸಲಾಗುತ್ತಿದೆ. ಈ ಹಿಂದೆ ಮೂರು ಕೃಷಿ ಕಾಯ್ದೆಗಳಂತೆ ಅಗ್ನಿಪಥವನ್ನು ಹಿಂಪಡೆಯಬೇಕಾಗುತ್ತದೆ. ಅದಕ್ಕೂ ಮುನ್ನವೇ ಸರ್ಕಾರ ಅದನ್ನು ಕೈಬಿಟ್ಟು, ಈಗ ಜಾರಿಯಲ್ಲಿರುವ ನೇಮಕಾತಿ ಪ್ರಕ್ರಿಯೆಯನ್ನೇ ಮುಂದುವರಿಸಬೇಕು. ಸಾರ್ವಜನಿಕರು ಕೂಡಾ ಶಾಂತಿಯುತವಾಗಿ ಹೋರಾಟ ನಡೆಸಬೇಕು ಎಂದು ವಿ.ಎಸ್.ಉಗ್ರಪ್ಪ ಮನವಿ ಮಾಡಿದರು.
ಕಾಂಗ್ರೆಸ್ ಪ್ರಮುಖರಾದ ಎಚ್.ಎಂ.ಎಫ್. ಇಮಾಮ್‌ನಿಯಾಜಿ, ಕೆ.ಪಾಂಡು, ವೀರಭದ್ರಪ್ಪ ನಾಯಕ, ಸುರೇಶ ಉಪಸ್ಥಿತರಿದ್ದರು.