

ಹಕ್ಕು ಪತ್ರದ ಲಕೋಟೆಯಲ್ಲಿ ಸಚಿವರ ಚಿತ್ರ ಯಾಕೆ ?
ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕೊಳಗೇರಿ ನಿವಾಸಿಗಳಿಗೆ ವಿತರಿಸಲಾಗುತ್ತಿರುವ ಹಕ್ಕು ಪತ್ರಗಳು ಸರ್ಕಾರಿ ನಿಯಮಾವಳಿಯಂತೆ ವಸ್ತು ನಿಷ್ಠೆಯಿಂದ ಕೂಡಿವೆಯೇ ಎಂದು ಪ್ರಶ್ನಿಸಿರುವ ಮಾಜಿ ಶಾಸಕ ಸಿರಾಜ್ ಶೇಖ್, ಚುನಾವಣಾ ಸಂದರ್ಭದಲ್ಲಿ ಹಕ್ಕು ವಿತರಿಸುತ್ತಿರುವುದು ಕೇವಲ ರಾಜಕೀಯ ಗಿಮಿಕ್ ಎಂದು ಲೇವಡಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯನಗರ ಕ್ಷೇತ್ರ ವ್ಯಾಪ್ತಿಯ ಹೊಸಪೇಟೆ ನಗರದ ವಿವಿಧ ವಾರ್ಡ್‌ಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕು ಪತ್ರ ಒದಗಿಸಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಆದರೆ, ಕಳೆದ 15 ವರ್ಷಗಳಿಂದ ಮನೆಯಲ್ಲಿ ಮಲಗಿದ್ದ ಶಾಸಕ ಆನಂದ ಸಿಂಗ್, ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ಹಕ್ಕು ಪತ್ರ ವಿತರಣೆಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.
ಹಕ್ಕು ಪತ್ರದಲ್ಲಿ ಉಲ್ಲೇಖಿಸಿರುವ ಹಲವು ಅಂಶಗಳು ಸಂಶಯಕ್ಕೆ ಕಾರಣವಾಗಿವೆ. ಹಕ್ಕು ಪತ್ರವನ್ನು ಲಕೋಟೆಯಲ್ಲಿ ವಿತರಿಸಲಾಗುತ್ತಿದೆ. ಸರ್ಕಾರಿ ಯೋಜನೆಗಳ ಆದೇಶ ಪತ್ರದಲ್ಲಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸುಪ್ರೀಂ ಕೋರ್ಟ್ ಮತ್ತು ಹೈಕೋಟ್ ನ್ಯಾಯಮೂರ್ತಿಗಳ ಭಾವಚಿತ್ರ ಮಾತ್ರ ಬಳಕೆ ಆದೇಶಿಸಿದೆ. ಹೀಗಾಗಿ ಹಕ್ಕು ಪತ್ರದ ಲಕೋಟೆಯಲ್ಲಿ ಸಚಿವ ಆನಂದ ಸಿಂಗ್ ಫೋಟೋ ಬಳಸಿರುವುದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಮುದ್ರಿಸಿದ್ದು ಯಾರು? ಎಲ್ಲಿ ಎಂಬುದನ್ನು ಅಧಿಕಾರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೇ, ಹಕ್ಕು ವಿತರಣೆಗೆ ಫಲಾನುಭವಿಗಳ ಮನೆಗಳನ್ನು ಸಮೀಕ್ಷೆ ನಡೆಸಿದ್ದು ಯಾರು? ಯಾವಾಗ ಸಮೀಕ್ಷೆ ನಡೆಸಿದರು? ಕೆಲ ಹಕ್ಕು ಪತ್ರಗಳಿಗೆ ಫಲಾನುಭವಿಗಳ ಸಹಿಯೇ ಇಲ್ಲ. ಯಾವ ಅಧಿನಿಯಮದಡಿ ಹಕ್ಕು ಪತ್ರಗಳನ್ನು ವಿತರಿಸಲಾಗುತ್ತಿದೆ ಎಂಬುದೇ ಸಂಶಯಕ್ಕೆ ಕಾರಣವಾಗಿದೆ. ಚುನಾವಣಾ ಗದ್ದಲದಲ್ಲಿ ಬಡವರನ್ನು ಸಮಸ್ಯೆಗೆ ದೂಡುವುದು ಸರಿಯಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ತಾಕೀತು ಮಾಡಿದರು.
ಬಿಜೆಪಿ ದಿವಾಳಿಯಾಗಿದೆಯೇ? ಸೋಮವಾರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ನಗರ ಪ್ರದೇಶದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ತಲಾ ಮೂವರು ಸ್ತ್ರೀ ಶಕ್ತಿ, ಸ್ವಸಹಾಯ ಸಂಘದ ಸದಸ್ಯೆಯರನ್ನು ಕರೆತರಬೇಕು. ಜೊತೆಗೆ ಇಲಾಖೆ ಎಲ್ಲ ಮೇಲ್ವಿಚಾರಕರು, ಕಚೇರಿಯ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆದೇಶಿಸಿರುವುದು ಆಕ್ಷೇಪಾರ್ಹ.
ಸರ್ಕಾರಿ ಕಾರ್ಯಕ್ರಮದ ನೆಪದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ, ಜನರು ಬರಲಾಗದಷ್ಟು ಬಿಜೆಪಿ ದಿವಾಳಿ ಯಾಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಶಂಕುಸ್ಥಾಪನೆ, ಉದ್ಘಾಟನಾ ಕಾರ್ಯಕ್ರಮಗಳಿಗೆ ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯರನ್ನು ಕರೆತರಬೇಕೆಂಬ ನಿಯಮವೂ ಇಲ್ಲ. ತಮ್ಮ ಕಾರ್ಯಕ್ರಮದಲ್ಲಿ ಜನ ಬಲ ಪ್ರದರ್ಶಿಸಲು ಸರ್ಕಾರದ ಆಡಳಿತಾಂಗ ಬಳಕೆಯಾಗುತ್ತಿರುವುದು ಖೇದಕರ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಸೋಮಶೇಖರ್ ಬಣ್ಣದಮನೆ, ಕಾಂಗ್ರೆಸ್ ಸೇವಾ ದಳದ ಮಾರಣ್ಣ ಇದ್ದರು.