

ಹೊಸಪೇಟೆ: ಅರಣ್ಯ ಇಲಾಖೆಯ ಕಿರುಕುಳದಿಂದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ ತಾಂಡಾದ ನಿವಾಸಿಗಳು ನಗರದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ತಾಂಡಾದಲ್ಲಿ ಪೂರ್ವಜರ ಕಾಲದಿಂದಲೂ ಭೂಮಿ ಉಳುಮೆ ಮಾಡುತ್ತಿದ್ದು, ಈ ಭೂಮಿ ಹ್ಯಾರಡ ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ತೆರವುಗೊಳಿಸಲು ನೋಟಿಸ್ ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳು ಕಳೆದ 6 ತಿಂಗಳಿAದ ನಾಲ್ಕೈದು ಬಾರಿ ನೋಟಿಸ್ ನೀಡುತ್ತಿದ್ದಾರೆ. ಇದಕ್ಕೆ ಸಹಾಯಕ ಸಂರಕ್ಷಣಾಧಿಕಾರಿಗಳ ಗಮನಕ್ಕೆ ತಂದರೂ, ಕೊನೆಯ ನೋಟಿಸ್ ಮುಟ್ಟಿದ 30 ದಿನಗಳ ಒಳಗಾಗಿ ಭೂಮಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಉಳುಮೆ ಮಾಡುತ್ತಿರುವ ರೈತರಿಗೆ ನೋಟಿಸ್ ನೀಡಿದ್ದಾರೆ. ರೈತರಿಗೆ ಅನ್ಯಾಯವಾಗದಂತೆ ಕ್ರಮವಹಿಸಬೇಕೆಂದು ನಿವೇದಿಸಿಕೊಂಡರು.
ಕಳೆದ ಹಲವಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರು ಕೃಷಿ ಚಟುವಟಿಕೆಗಳಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಮಾಡಿಕೊಂಡಿದ್ದು, ತಹಸೀಲ್ದಾರ್ ನೀಡಿರುವ ಪಟ್ಟಜಮೀನಿನ ವಿಸ್ತೀರ್ಣ ತಾಳೆಯಾಗಿಲ್ಲ. ಈ ಕುರಿತು ಪುನಃ ಪರಿಶೀಲಿಸಿ ಕಂದಾಯ ಇಲಾಖೆಗೆ ಆದೇಶ ಹೊರಡಿಸಬೇಕು. ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿ, ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತರಾದ ವಿವೇಕಾನಂದ ರಾಠೋಡ್, ರಾಜನಾಯ್ಕ ಲಮಾಣಿ, ವೆಂಕಟೇಶ್ ಗೌಡ್ರ, ರಾಜಾನಾಯ್ಕ, ವೀರೇಶ್, ರವಿಕುಮಾರ್ ರಾಠೋಡ್, ಪ್ರದೀಪ ಗೌಡ್ರ ಇತರರಿದ್ದರು.