

ಹೊಸಪೇಟೆ: ಮೀನುಗಾರಿಕೆ ಮೂಲ ವೃತ್ತಿದಾರರು ಮತ್ತು ಹೊಸದಾಗಿ ಮೀನುಗಾರಿಕೆ ಮಾಡಲು ಬರುವವರ ಮಧ್ಯೆ ಉತ್ತಮ ರೀತಿಯ ಸಂಬAಧ ಇರಬೇಕು. ಮೀನುಗಾರಿಕೆ ಬಗ್ಗೆ ಗೊತ್ತಿಲ್ಲದೇ ಇರುವವರು ಮಧ್ಯಪ್ರವೇಶಿಸಿ ತೊಂದರೆ ನೀಡಿದರೆ ಸಹಿಸಿಕೊಳ್ಳಬಾರದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಆಡಿಟೋರಿಯಂ ಹಾಲಿನಲ್ಲಿ ಶನಿವಾರ ನಡೆದ ವಿಜಯನಗರ, ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಮೀನುಗಾರರ ಜತೆ ಸಂವಾದದಲ್ಲಿ ಮಾತನಾಡಿದರು.
ಮೀನುಗಾರಿಕೆ ವೃತ್ತಿಯಲ್ಲಿರುವವರು ಒಂದೇ ವೃತ್ತಿಯ ಮೇಲೆ ಅವಲಂಬಿತರಾಗದೇ ಬೇರೆ ವೃತ್ತಿಯಲ್ಲಿ ತೊಡಗುವ ಪ್ರಾವಿಣ್ಯತೆ ಹೊಂದಬೇಕು. ಮೀನುಗಾರರ ಮಕ್ಕಳಿಗೆ ವಿಶೇಷ ಶಿಷ್ಯವೇತನ ನೀಡಲಾಗುತ್ತದೆ. ಐಎಎಸ್, ಐಪಿಎಸ್ ಓದ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ಕೊಚಿಂಗ್‌ಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಸರ್ಕಾರದಿAದ ಮೀನುಗಾರರಿಗೆ ಸಿಗಬೇಕಾದ ಎಲ್ಲ ಸೌಕರ್ಯಗಳನ್ನು ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಮೀನುಗಾರಿಕೆ ಉತ್ಪಾದನೆ ಹೆಚ್ಚಾಗಬೇಕು. ರಾಜ್ಯದಲ್ಲಿ ಈ ಬಾರಿ ಮೀನುಗಾರರಿಗೆ 10 ಸಾವಿರ ವಸತಿ ಮಂಜೂರು ಮಾಡಲಾಗಿದೆ. ಇದರಿಂದಾಗಿ ಸೂಕ್ತವಾದ ದಾಖಲಾತಿ ಒದಗಿಸುವ ಅರ್ಹ ಬಡ ಮೀನುಗಾರರಿಗೆ ವಸತಿ ವ್ಯವಸ್ಥೆಯಾಗಲಿದೆ. ವಿಜಯನಗರ ಜಿಲ್ಲೆ ಹೇರಳವಾಗಿ ನೀರಿನ ಮೂಲ ಮತ್ತು ಸೌಕರ್ಯ ಇರುವ ಜಿಲ್ಲೆಯಾಗಿದೆ. ಇಲ್ಲಿ ತುಂಗಭದ್ರಾ ಜಲಾಶಯ ಇರುವುದರಿಂದ ಇಲ್ಲಿ ಮೀನುಗಾರರ ಸಂಖ್ಯೆ ಹೆಚ್ಚಿದೆ. ಸ್ವಂತ ಕಚೇರಿ ಇದ್ದಲ್ಲಿ ಇಲಾಖೆ ಕಾರ್ಯಗಳಿಗೆ ಅನುಕೂಲವಾಗಲಿದೆ. ಜಿಲ್ಲಾಡಳಿತ ಜಾಗ ನೀಡಿದಲ್ಲಿ ಕೂಡಲೇ ಹೊಸ ಕಚೇರಿ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಮೀನುಗಾರಿಕೆ ನಿರ್ದೇಶಕ ದಿನೇಶ ಕಳ್ಳೇರ, ಜೆಡಿ ಷಡಕ್ಷರಿ, ಬಳ್ಳಾರಿಯ ಡಿಡಿ ಶಿವಣ್ಣ, ಎಡಿಗಳಾದ ಮಲ್ಲೇಶಿ, ಬಸವನಗೌಡ, ಶ್ರೀನಿವಾಸ ಕುಲಕರ್ಣಿ, ರಿಯಾಜ್ ಅಹಮದ್ ಇತರರಿದ್ದರು.