

ಹೊಸಪೇಟೆ: ನೂತನ ಮೂರು ಕೃಷಿ ಕಾಯ್ದೆ, ವಿದ್ಯುತ್ ಖಾಸಗೀಕರಣ, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕೆಂದು ಒತ್ತಾಯಿಸಿ ಮಾ.22ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕೃಷಿಕರನ್ನು ನಿರ್ಗತಿಕರನ್ನಾಗಿ ಮಾಡುವ ಹುನ್ನಾರಕ್ಕೆ ಮುಂದಾಗಿದೆ. ಭಾರತ ಈಗ ಆಹಾರ ಉತ್ಪನ್ನಗಳನ್ನು ರಫ್ತು ಮಾಡುವ ದೇಶವಾಗಿ ಬೆಳೆದಿದೆ. ಆದರೆ, ರೈತರು ಮಾತ್ರ ಸಾಲಗಾರರಾಗಿಯೇ ಉಳಿದಿದ್ದಾರೆ ಎಂದರು.
ರಾಜ್ಯದಲ್ಲಿ 87 ಲಕ್ಷ ರೈತ ಕುಟುಂಬಗಳಿವೆ. ಈ ಪೈಕಿ 67 ಲಕ್ಷ ರೈತರು ಕೇವಲ 5 ಎಕರೆ ಭೂಮಿ ಹೊಂದಿದ್ದಾರೆ. 40 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು, ಉಚಿತ ವಿದ್ಯುತ್ ಪೂರೈಸುವ ಬದಲು ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸರ್ಕಾರ ಮುಂದಾಗಿರುವುದು ಖಂಡನೀಯ. ಎಪಿಎಂಸಿಗಳಲ್ಲಿ ನಾನಾ ಸಮಸ್ಯೆಗಳಿದ್ದು, ನಿವಾರಿಸಬೇಕು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು, ವಯಸ್ಸಾದ ದನಗಳ ಮಾರಾಟಕ್ಕೂ ನಿಷೇಧ ಹೇರಲಾಗಿದೆ ಎಂದರು.
ಸಂಘದ ಜಿಲ್ಲಾ ಅಧ್ಯಕ್ಷ ಬಿ.ಗೋಣಿಬಸಪ್ಪ, ತಾಲೂಕು ಅಧ್ಯಕ್ಷ ಗಂಟಿ ಸೋಮಶೇಖರ್, ಪದಾಧಿಕಾರಿಗಳಾದ ಎಂ.ಬಸವರಾಜ, ಕೆ.ಮರಿಬಸಪ್ಪ, ವಸಂತಕುಮಾರ್, ಸ್ವರಾಜ್ ಇಂಡಿಯಾ ಮುಖಂಡ ಅಮ್ಜದ್ ಪಾಷಾ ಇತರರಿದ್ದರು.