

ಹೊಸಪೇಟೆ: ಈ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಾರೆ. ಹಾಗಾಗಿ ವಿಜಯನಗರ ಜಿಲ್ಲೆಯಲ್ಲಿ ಹತ್ತು ಸಕ್ಕರೆ ಕಾರ್ಖಾನೆ ಸ್ಥಾಪನೆಯಾದರೂ ಸ್ವಾಗತಿಸುವೆ. ಆದರೆ, ನನ್ನ ಅವಧಿಯಲ್ಲೇ ನಾಗೇನಹಳ್ಳಿ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲಾಗುವುದು ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಅನುಕೂಲಕ್ಕಾಗಿ ನಾಗೇನಹಳ್ಳಿ, ಕಾಳಗಟ್ಟ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲಾಗುವುದು. ಈಗಾಗಲೇ 77 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ. ಖಾಸಗಿ ಜಾಗ ಕೂಡ ಪಕ್ಕದಲ್ಲೇ ಇದೆ. ಈ ಜಾಗದ ಬಗ್ಗೆ ನಾಗೇನಹಳ್ಳಿ ಗ್ರಾಪಂನಲ್ಲೂ ನಿರ್ಣಯಿಸಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪರ್ಯಾಯ ಜಾಗ ಗುರುತಿಸಲಾಗುವುದು. ಶಾಲೆ ಕಟ್ಟಡ ನಿರ್ಮಾಣಕ್ಕೆ 30 ಕೋಟಿ ರೂ.. ಮಂಜೂರಾಗಿದೆ. ರೈತರ ಹಿತದೃಷ್ಟಿ ಹಾಗೂ ಎತ್ತಿನ ಬಂಡಿಗಳಲ್ಲಿ ಕಬ್ಬು ಸಾಗಾಟ ಮಾಡಲು ಅನುಕೂಲ ಆಗುವಂತೇ ನಾಗೇನಹಳ್ಳಿ ಭಾಗದಲ್ಲೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಗೇಟ್‌ಗಳ ಬದಲಾವಣೆ
ಜಲಾಶಯದ ಗೇಟ್‌ಗಳ ಬದಲಾವಣೆಗಾಗಿ ಈಗಾಗಲೇ ತುಂಗಭದ್ರಾ ಮಂಡಳಿ ಪರಿಣತ ತಜ್ಞರ ಸಮಿತಿಯಿಂದ ವರದಿ ಪಡೆದಿದೆ. ಈ ವರ್ಷ ಎಂಟು ಗೇಟ್‌ಗಳನ್ನು ಬದಲಿಸುವ ಸಾಧ್ಯತೆ ಇದೆ. ಎಲ್ಲವನ್ನು ಕ್ರಮಬದ್ಧವಾಗಿ ಮಾಡಲಿದೆ. ತರಾತುರಿಯಲ್ಲಿ ಗೇಟ್ ಬದಲಿಸಲು ಆಗುವುದಿಲ್ಲ. ಇನ್ನೂ ಈ ಬಾರಿ ಜಲಾಶಯದಲ್ಲಿ ನೀರಿನ ಸಂಗ್ರಹವನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹ ಮಾಡಲಿದೆ. ನೀರಾವರಿ ಇಲಾಖೆ ತಜ್ಞರು ಈ ಬಗ್ಗೆ ಕಾಳಜಿ ವಹಿಸಲಿದ್ದಾರೆ ಎಂದರು.