ಹೊಸಪೇಟೆ: ರೈತರ ದಿನಾಚರಣೆ ನಿಮಿತ್ತ ರೈತರ ಜಿಲ್ಲಾ ಸಮಾವೇಶ ಹಾಗೂ ರೈತರ ಹಬ್ಬ ಶೋಭಾಯಾತ್ರೆ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಸಭಾಂಗಣದಲ್ಲಿ ಡಿ.27ರಂದು ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ (ವಾಸುದೇವ ಮೇಟಿ ಬಣ) ಜಿಲ್ಲಾಧ್ಯಕ್ಷ ಸಿ.ಎ.ಗಾಳೆಪ್ಪ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿ ಮತ್ತು ಗರಗ ನಾಗಲಾಪುರ ಒಪ್ಪತ್ತೇಶ್ವರ ಮಠದ ಶ್ರೀ ನಿರಂಜನ ಪ್ರಭುದೇಶಿಕರು ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಮತ್ತು ಶಾಸಕ ಎಚ್.ಆರ್.ಗವಿಯಪ್ಪ ಉದ್ಘಾಟಿಸಲಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ನೇಗಿಲು ಪೂಜೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ 300 ರೈತರಿಗೆ ಸನ್ಮಾನ, ರೈತರ ಪ್ರತಿಭಾವಂತೆ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದರು.
ಇಲ್ಲಿನ ವಡಕರಾಯನ ದೇಗುಲದ ಬಳಿ ಶೋಭಾಯಾತ್ರೆಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮತ್ತು ಎಸ್ಪಿ ಬಿ.ಎಲ್.ಶ್ರೀಹರಿಬಾಬು ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ವಿವಿಧ ಆಕರ್ಷಕ ಕಲಾತಂಡಗಳು, ಕಳಸ ಹೊತ್ತ ಮಹಿಳೆಯರು ಸೇರಿದಂತೆ ಇತರೆ ಕಲಾವಿದರೊಂದಿಗೆ ಭವ್ಯವಾಗಿ ಒಳ ಕ್ರೀಡಾಂಗಣ ತಲುಪಲಿದೆ ಎಂದರು.
ರೈತರು ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ, ಯಾವ ಸರ್ಕಾರಗಳು ಕೂಡ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ರೈತರಿಗೋಸ್ಕರ ಯಾವುದೇ ಒಬ್ಬ ಶಾಸಕರು ಧ್ವನಿ ಎತ್ತಿಲ್ಲ. ಈ ಕುರಿತು ವಿಧಾನಸೌಧದಲ್ಲಿ ಬಿಲ್ ಪಾಸ್ ಮಾಡುವಂತೆ ಈ ಬಗ್ಗೆ ಮಾತನಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದೆ ನಿರ್ಲಕ್ಷ್ಯ ಧೋರಣೆ ಮುಂದುವರೆದಲ್ಲಿ ಹೊಸಪೇಟೆ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ವೆಂಕೋಬಣ್ಣ, ಸುರೇಶ್, ಪಾರ್ವತಿ, ಪೂಜಾ ಇದ್ದರು.