

ಹೊಸಪೇಟೆ: ಇತ್ತೀಚೆಗೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ನಡೆದ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಮತ್ತೆ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಸೆ.28ರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕವಿತಾ (30) ಹಾಗೂ ಮೈಲಾರಪ್ಪ (45) ಚಿಕಿತ್ಸೆ ಪಡೆಯುತ್ತಿದ್ದರು. ಏಳು ದಿನಗಳ ಕಾಲ ನಡೆದ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿ ವಕೀಲ ಹಾಲಪ್ಪ (43) ಹಾಗೂ ಶುಕ್ರವಾರ ಬೆಳಗ್ಗೆ ಗಂಗಮ್ಮ(80) ಕೂಡ ಮೃತಪಟ್ಟಿದ್ದರು. ಶುಕ್ರವಾರ ರಾತ್ರಿ ಅಂತ್ಯಸAಸ್ಕಾರ ನಡೆಸಿದ ಗ್ರಾಮಸ್ಥರಿಗೆ ಶನಿವಾರ ಬೆಳಗ್ಗೆ ಕೂಡ ಇಬ್ಬರ ಸಾವಿನ ಸುದ್ದಿ ಕೇಳಿ ನೀರವಮಮೌನ ಆವರಿಸಿದೆ. ಒಂದೇ ಕುಟುಂಬದಲ್ಲಿ ನಾಲ್ಕು ಜನರನ್ನು ಅಂತ್ಯಸAಸ್ಕಾರ ನಡೆಸಿದ ಗ್ರಾಮದಲ್ಲಿ ಭಯದ ವಾತವರಣ ಸೃಷ್ಠಿಯಾಗಿದೆ.
ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಸೆ.27 ರಂದು ಸಿಲಿಂಡರ್ ಸ್ಪೋಟವಾಗಿ 11 ಜನರು ಗಾಯಗೊಂಡಿದ್ದರು. ಗಾಯಾಳುಗಳನ್ನು ತೋರಣಗಲ್ಲು ಸಂಜೀವಿನ ಆಸ್ಪತ್ರೆ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಆರು ಜನರನ್ನು ಕಳುಹಿಸಲಾಯಿತು. ಈ ಪೈಕಿ ಚಿಕಿತ್ಸೆ ಫಲಕಾರಿಯಾಗದೇ ನಾಲ್ಕು ಜನರು ಮೃತಪಟ್ಟಿದ್ದಾರೆ. ಇನ್ನೂ ಇಬ್ಬರು ಗುಣಮುಖರಾಗಿದ್ದಾರೆ. ತೋರಣಗಲ್ಲು ಸಂಜೀವಿನ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಜನರು ಕೂಡ ಗುಣಮುಖರಾಗಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಜಮೀರ್ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ನಂತರ ಆಂಬುಲೆನ್ಸ್ ಮೂಲಕ ಮೃತರನ್ನು ಸ್ವಾಗ್ರಾಮಕ್ಕೆ ಕಳುಹಿಸಿಕೊಡಲು ಸಚಿವರು ವ್ಯವಸ್ಥೆ ಮಾಡಿಕೊಟ್ಟರು.