ಮೂರ್ಛೆರೋಗ ಬಗೆಗಿನ ಮೌಢ್ಯತೆ ಹೊರಬನ್ನಿ

16 MANJU 03
Published on

ಹೊಸಪೇಟೆ: ಮೂರ್ಛೆರೋಗದ ಬಗೆಗಿನನ ಮೌಢ್ಯತೆ ಹಾಗೂ ಮಿಥ್ಯಗಳಿಂದ ಸಾಮಾನ್ಯ ಜನರು ಹೊರಬರಬೇಕಿದೆ. ರೋಗದಿಂದ ಭಯಭೀತರಾಗದಂತೆ ಸರಿಯಾದ ಔಷಧಿಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಆಡಳಿತ ವೈದ್ಯಾಧಿಕಾರಿಡಾ.ಹರಿಪ್ರಸಾದ್ ಹೇಳಿದರು.

ಜಿಲ್ಲಾಡಳಿತ, ಜಿಪಂ, ಮೆದುಳು ಆರೋಗ್ಯ ಉಪಕ್ರಮ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಅಂತರಾಷ್ಟ್ರೀಯ ಅಪಸ್ಮಾರ ದಿನಾಚರಣೆಯಲ್ಲಿ ಮಾತನಾಡಿದರು.

ರೋಗಗ್ರಸ್ತತೆಯನ್ನು ಮೀರಿ, ಅಪಸ್ಮಾರದ ಅರಿವಿನೊಂದಿಗೆ ಜೀವನವನ್ನು ಸಶಕ್ತಗೊಳಿಸುವ ಎಂಬ ಘೋಷವಾಕ್ಯದೊಂದಿಗೆ ಅಂತರಾಷ್ಟ್ರೀಯ ಅಪಸ್ಮಾರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮೂರ್ಛೆರೋಗದ ಬಗ್ಗೆ ಸಾಮಾನ್ಯ ಜನರು ಸತ್ಯಾಸತ್ಯತೆಗಳನ್ನು ಅರಿಯಬೇಕಿದೆ. ಇದೊಂದು ಚಿಕಿತ್ಸೆ ನೀಡ ಬಹುದಾದ ಕಾಯಿಲೆಯಾಗಿದ್ದು, ಸರಿಯಾದ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಮೂರ್ಛೆ ರೋಗವನ್ನು ಗುಣಪಡಿಸುವುದು ಸಾಧ್ಯ. ಮೂರ್ಛೆರೋಗಕ್ಕೆ ಒಳಗಾದ ವ್ಯಕ್ತಿಯ ವಿಡಿಯೋ ಮಾಡಬೇಕು, ಇದರಿಂದ ವೈದ್ಯರಿಗೆ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಮೂರ್ಛೆ ಬಂದಾಗ ರೋಗಿಯ ಕೈಯಲ್ಲಿ ಬೀಗದ ಕೈ ಇರಿಸುವುದು, ಈರುಳ್ಳಿ ಇಲ್ಲವೇ ಕೊಳಕು ಪಾದರಕ್ಷೆಯನ್ನು ಮೂಸುವಂತೆ ಮಾಡಬಾರದು ಎಂದರು.

ಮೂರ್ಛೆ ಬಂದಾಗರೋಗಿಗೆ ಪ್ರಥಮಚಿಕಿತ್ಸೆ ನೀಡಬೇಕು ಹಾಗೂ ಸಮೀಪದ ಆಸ್ಪತ್ರೆಗೆ ಸೇರಿಸಬೇಕು. ವೈದರು ನೀಡುವ ಸಲಹೆಗಳನ್ನು ಪಾಲಿಸಬೇಕು. ಅಪಸ್ಮಾರದ ವೇಳೆ ಬಾಯಿಯಲ್ಲಿರುವ ಯಾವುದೇದ್ರವವು ಹೊರಬರುವಂತೆ ನೋಡಿಕೊಳ್ಳಬೇಕು. ವ್ಯಕ್ತಿಯತಲೆಯ ಕೆಳಗೆ ಕೆಲವು ರೀತಿಯ ಮೃದುವಾದ ಬಟ್ಟೆಯನ್ನು ಇರಿಸಬೇಕು. ವ್ಯಕ್ತಿಯ ಬಾಯಿಗೆ ಏನನ್ನೂ ಹಾಕಬಾರದು. ವೈದ್ಯರ ಬಳಿ ಹೋಗುವ ವರೆಗೂ ವ್ಯಕ್ತಿಯೊಂದಿಗೆ ಜತೆಗಿರಬೇಕು. ವ್ಯಕ್ತಿಯನ್ನು ವಿಶ್ರಾಂತಿ ಅಥವಾ ಮಲಗಲು ಅವಕಾಶ ಮಾಡಬೇಕು ಎಂದರು.

ವೈದ್ಯಾರಾದ ಡಾ.ಭಾರತ್, ಡಾ.ಕೆ.ರಾಧಿಕಾ, ಡಾ.ಅಶಾಕೋರಿ, ಡಾ.ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net