

ಹೊಸಪೇಟೆ: ನಾವು ಪ್ರಾಕೃತಿಕ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ವಿಜಯನಗರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ನಗರದ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಬುಧವಾರ ಹಮ್ಮಿಕೊಂಡ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪರಿಸರ ಕಾಳಜಿ ಬರೀ ಒಂದು ದಿನಕ್ಕೆ ಸೀಮಿತವಾಗಬಾರದು. ವರ್ಷಪೂರ್ತಿ ಆಚರಣೆಯಾಗಬೇಕು. ಮಾನವ ಪರಿಸರಕ್ಕೆ ಹಾನಿ ಉಂಟು ಮಾಡಿದರೆ ಪ್ರಕೃತಿ ನಮ್ಮ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಪ್ರಕಟಪಡಿಸುತ್ತಿದೆ. ಎಲ್ಲರಿಗೂ ಪರಿಸರ ಕಾಳಜಿ ಅಗತ್ಯ. ಈ ಮೂಲಕ ದೇಶದ ಸಮೃದ್ಧ ಪ್ರಗತಿ ಕೂಡ ಸಾಧ್ಯ. ಪ್ರಕೃತಿಯ ಉಳಿವಿಗೆ ಎಲ್ಲರೂ ಕೈಜೋಡಿಸುವ ಜತೆಯಲ್ಲಿ ಪ್ರತಿಜ್ಞೆ ಮಾಡುವುದು ಅಗತ್ಯ ಎಂದರು.
ನಾವು ನೆಲ- ಜಲ, ಅರಣ್ಯ, ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಪ್ರಾಕೃತಿಕ ಸಂಪನ್ಮೂಲ ಸಂರಕ್ಷಣೆಗೆ ಎಲ್ಲರೂ ಪಣ ತೊಡಬೇಕಿದೆ. ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಪ್ರಕೃತಿಯ ಮೇಲೆ ಪ್ರೇಮ ಮೂಡಿಸಿದರೆ ಭವಿಷ್ಯದಲ್ಲಿ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಶಾಲಾ ಪರಿಸರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಸಸಿನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ, ಜೀವಿ-ವೈವಿಧ್ಯ ಹಾಗೂ ನೀರಿನ ಸಂರಕ್ಷಣೆಯAತಹ ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ದಿಸೆಯಲ್ಲಿ ಶಾಲೆಯಲ್ಲಿ ಪರಿಸರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಕನ್ನಡ ವಿವಿ ದೃಶ್ಯಕಲಾವಿಭಾಗದ ಮುಖ್ಯಸ್ಥ ಡಾ.ಮೋಹನ್ ಪಾಂಚಾಳ್ ಮಾತನಾಡಿ, ಮಕ್ಕಳ ಚಿತ್ರಗಳನ್ನು ನೋಡುವುದು ಚಂದ. ಅವರಿಗೆ ಬರೆಯಲು ಬರದಿದ್ದರೂ ಏನೋ ಒಂದು ಬರೆಯುತ್ತಾರೆ. ಎಲ್ಲರೂ ಒಂದೇ ರೀತಿ ಬರೆಯುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಆಲೋಚನೆಕ್ರಮಗಳಿಗೆ ಅನು ಗುಣವಾಗಿ ಒಂದೊAದು ವಿಭಿನ್ನವಾಗಿ ಬರೆಯುತ್ತಾರೆ. ಅವರ ಕಲ್ಪನೆ ಏನಿರುತ್ತದೆ ಹಾಗೆ ಬರೆಯುತ್ತಾರೆ. ಮಕ್ಕಳಿಗೆ ಇದು ಒಳ್ಳೆಯ ವೇದಿಕೆ. ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸಬೇಕು ಎಂದರು.
ಪ್ರಾಂಶುಪಾಲ ಅನ್ಸಾರಿ ಭಾಷಾ, ಉಪ ಪ್ರಾಂಶುಪಾಲ ವೆಂಕಟೇಶ ಕುಲಕರ್ಣಿ, ಮುಖ್ಯಶಿಕ್ಷಕಿ ಪಿ.ಬಿ.ಹಲಗಣಿ, ಚಿತ್ರಕಲ ಶಿಕ್ಷಕರಾದ ಎಸ್.ಗಂಗಾಧರ. ಭಾರತಿ, ಶಿಕ್ಷಕರಾದ ಕೆ.ಬಿ.ತಿಮ್ಮಪ್ಪ ಇತರರಿದ್ದರು.
ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವಾಧ್ಯಕ್ಷ ಎಂ.ಧರ್ಮನಗೌಡ ಮಾತನಾಡಿ, ನಮಗೆ ಆಮ್ಲಜನಕ ಬೇಕು ಎಂದರೆ ಮರಗಳ ಬೆಳೆಸುವುದು ಅಗತ್ಯ. ಆಮ್ಲಜನಕ ಇಲ್ಲ ಎಂದರೆ, ಸಾವು ಖಚಿತ. ವಾಯುಮಾಲಿನ್ಯದಿಂದಾಗುವ ಪರಿಸರ ಮಾಲಿನ್ಯದ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳ ಬೇಕಿದೆ. ವಾಯುಮಾಲಿನ್ಯ ಅಪಾಯಕಾರಿಯಾಗಿದೆ. . ಇನ್ನಾದರೂ ಎಚ್ಚೆತ್ತುಕೊಂಡು ಅರಣ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಲೇಬೇಕಾಗಿದೆ. ಪರಿಸರ ಸಂರಕ್ಷಣೆಯ ಕುರಿತು ಚಿತ್ರ ಬರೆ ಯುತ್ತಿರುವುದು ಅವರಲ್ಲಿ ಪರಿಸರ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಲಿದೆ. ಮಕ್ಕಳು ಹಾಗೂ ಯುವ ಜನರು ಪರಿಸರ ಸಂರಕ್ಷಣೆಯ ಮಹತ್ವ ಅರಿತರೆ, ಪರಿಣಾಮಕಾರಿಯಾಗಿ ಪರಸರ ಸಂರಕ್ಷಿಸಬಹುದು. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ ಆಯೋಜಿಸಿದ ವಿಜಯವಾಣಿಗೆ ಕೃತಜ್ಞತೆ ಸಲ್ಲಬೇಕು ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಜಯವಾಣಿ ದಿನಪತ್ರಿಕೆ ಆರೋಜಿಸಿದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ 100 ಹೆಚ್ವು ವಿದ್ಯಾರ್ಥಿಗಳು ಉತ್ಸುಕತೆಯಿಂದ ಪರಿಸರಕ್ಕೆ ಬಣ್ಣ ಹಚ್ಚಿ ಸಂಭ್ರಮಿಸಿದರು. ವಿದ್ಯಾರ್ಥಿಗಳು ಪರಿಸರ ಕುರಿತು ವೈವಿಧ್ಯಮಯ ಚಿತ್ರಗಳನ್ನು ರಚಿಸಿದ್ದರು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿರುವುದನ್ನು ಪರಿಸರ ನಾಶ, ಬರಗಾಲಕ್ಕೆ ಆಹ್ವಾನ ನಿರೂಪಿಸುವ ಚಿತ್ರ, ಅರಣ್ಯ ನಾಶ, ಮನುಷ್ಯನಿಂದ ಜೀವ ಭಿಕ್ಷೆ ಬೇಡುತ್ತಿರುವ ವೃಕ್ಷ ದೇವತೆ, ಸುಂದರ ಪರಿಸರದ ರಮಣೀಯ ಚಿತ್ರಗಳು, ನೆಲ- ಜಲ, ಅರಣ್ಯ, ಜೀವ ವೈವಿಧ್ಯ ಹಾಗೂ ಪರಿಸರದ ವಿವಿಧ ಪ್ರಕಾರಗಳ ಕುರಿತು ಮಕ್ಕಳ ಕುಂಚಗಳಲ್ಲಿ ಮೂಡಿ ಬಂದಿದ್ದು ನೋಡುಗರ ಗಮನ ಸೆಳೆಯಿತು.
ಮಕ್ಕಳಲ್ಲಿ ವಿಜಯವಾಣಿ ಪತ್ರಿಕೆಯೂ ಪರಿಸರ ಕಾಳಜಿಯಿಂದ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಂಡಿದೆ. ಇದು ಕೇವಲ ಚಿತ್ರ ಬಿಸಿ ಹೋಗುವುದಲ್ಲ. ಪರಿಸರ ಉಳಿಸಿ ಬೆಳೆಸು ಕಾರ್ಯ ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. - ಅನ್ಸಾರಿ ಭಾಷಾ, ಪ್ರಾಂಶುಪಾಲ, ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಸಪೇಟೆ