

ಹೊಸಪೇಟೆ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾದ ಶಿಕ್ಷಕರು, ತಮ್ಮೊಳಗಿನ ಪ್ರತಿಭೆ ಪ್ರದರ್ಶಿಸಲು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಹೇಳಿದರು.
ಶಿಕ್ಷಕರ ದಿನಾಚರಣೆ ಪ್ರಯುಕ್ತ ನಗರದ ಚಿತ್ತವಾಡ್ಗಿ ಪಿಬಿಎಸ್ ಆ್ಯಂಡ್ ಸನ್ಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ಏರ್ಪಡಿಸಿದ್ದ 2 ದಿನಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಬಾಲ್ಯ, ಶಾಲಾ ಕಾಲೇಜು ದಿನಗಳನ್ನು ಮೆಲುಕು ಹಾಕುವಂತಾಗಬೇಕು ಎಂದು ಸಲಹೆ ನೀಡಿದರು.
ಶಿಕ್ಷಣಾಧಿಕಾರಿ ಪಿ.ಡಿ.ಭಜಂತ್ರಿ ಮಾತನಾಡಿ, ಶಿಕ್ಷಕರ ದಿನದ ಪ್ರಯುಕ್ತ ಶಿಕ್ಷಕರಿಗಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಶಿಕ್ಷಕರ ಸಂಘದಿಂದ ಆಯೋಜಿಸಿರುವುದು ಶ್ಲಾಘನೀಯ. ಸದಾ ತರಗತಿ ಕೊಠಡಿಯಲ್ಲೇ ಕಾಲ ಕಳೆಯುವ ಶಿಕ್ಷಕರಿಗೆ ಕ್ರೀಡಾಕೂಟ ನವೋತ್ಸಾಹ ತುಂಬಲಿದೆ ಎಂದರು.
ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಬಸವರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷದಂತೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶಿಕ್ಷಕರ ದಿನದ ಪ್ರಯುಕ್ತ ವಾಲಿಬಾಲ್, ತ್ರೋಬಾಲ್, ರಂಗೋಲಿ, ಚೆಸ್, ಕೇರಂ, ಗುಂಡು ಎಸೆತ, ಭಾವಗೀತೆ, ಜಾನಪದಗೀತೆ ಇತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಶಿಕ್ಷಕರ ಸಂಘದ ಉಪಾಧ್ಯಕ್ಷ ಜಾಕೀರ್ ಹುಸೇನ್, ಖಜಜಾಂಚಿ ದ್ಯಾಮನಾಯ್ಕಾ, ಗೌರವಾಧ್ಯಕ್ಷ ಹೇಮರೆಡ್ಡಿ, ಸಂಘಟನಾ ಕಾರ್ಯದರ್ಶಿ ನೀಲಮ್ಮ ಗಚ್ಚಿನಮಠ, ಪರಶುರಾಮ, ಸಹ ಕಾರ್ಯದರ್ಶಿ ಲಲಿತಮ್ಮ, ಸಂಚಾಲಕರಾದ ಗುರುಬಸವರಾಜ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಪ್ರಕಾಶ್, ಶಿಕ್ಷಣ ಸಂಯೋಜಕ ಮಲ್ಲೇಶಪ್ಪ ಇದ್ದರು.