ಎಚ್ಡಿಕೆಯಿಂದ ಒತ್ತುವರಿಯಾದ ಗೋಮಾಳ ಸ್ವಾಧೀನಪಡಿಸಿ

29 MANJU 04
Published on

ಹೊಸಪೇಟೆ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರು ಒತ್ತುವರಿ ಮಾಡಿಕೊಂಡ ಗೋಮಾಳ ಜಮೀನನ್ನು ಸರ್ಕಾರ ತಕ್ಷಣ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ, ಸಂಸದ ಡಾ.ಸಿ.ಎನ್.ಮಂಜುನಾಥ ಸಹಿತ ಕುಟುಂಬದ ಇತರ ಸದಸ್ಯರು ಕಬಳಿಸಿರುವ 71 ಎಕರೆ 30 ಗುಂಟೆ ಗೋಮಾಳವನ್ನು ಸರ್ಕಾರ ತಕ್ಷಣ ವಶಪಡಿಸಿಕೊಳ್ಳಬೇಕು, ಒತ್ತುವರಿ ಮಾಡಿಕೊಂಡ ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಒತ್ತುವರಿಗೆ ನೆರವಾದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರೇಮಠ ಆಗ್ರಹಿಸಿದರು.

ಈ ಒತ್ತುವರಿ ಕುರಿತಂತೆ ಕರ್ನಾಟಕ ಹೈಕೋರ್ಟ್ 21 ಅದೇಶಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಸಲ್ಲಿಸಿದ 274 ಪುಟಗಳ ವಿಶೇಷ ಅನುಜ್ಞಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಚಿವ ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರು ಇದೀಗ ಹೈಕೋರ್ಟ್ನಲ್ಲೇ ತಮ್ಮ ಅಹವಾಲು ಸಲ್ಲಿಸಬೇಕಾಗಿದೆ. ತಮ್ಮ ಬಳಿ ಎಲ್ಲಾ ದಾಖಲೆಗಳು ಇದೆ ಎಂದು ಅವರು ಹೇಳಿಕೆ ನೀಡುತ್ತಿದ್ದಾರೆ, ಅದನ್ನು ಕೋರ್ಟ್ಗೆ ಸಲ್ಲಿಸಲಿ, 2020ರ ಜನವರಿ 14ರಂದು ಹಾಗೂ ಕಳೆದ ಮಾರ್ಚ್ 19ರಂದು ಹೈಕೋರ್ಟ್ ನೀಡಿದ ಆದೇಶವನ್ನು ಸರ್ಕಾರ ಪಾಲಿಸದೆ ಸರ್ಕಾರಕ್ಕೆ ಈಗ ಬೇರೆ ದಾರಿಯೇ ಇಲ್ಲವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net