ಪ್ರತಿಧ್ವನಿಸಿದ ಮಹಿಳೆ ಸಾವು ಪ್ರಕರಣ

190123 Hospet City Council Special General Meeting
ಹೊಸಪೇಟೆ ನಗರಸಭೆಯಲ್ಲಿ ಅಧ್ಯಕ್ಷೆ ಸುಂಕಮ್ಮ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕುಡಿಯುವ ನೀರಿನ ಅವ್ಯವಸ್ಥೆಯ ಫೋಟೋ ಪ್ರದಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
Published on

ಹೊಸಪೇಟೆ: ಕಲುಷಿತ ನೀರು ಸೇವಿಸಿ ಒಬ್ಬರು ಬಲಿಯಾದ ಮೇಲೆ ನಗರಸಭೆ ಎಚ್ಚೆತ್ತುಕೊಂಡಿದೆ. ಜನ ಸಾಮಾನ್ಯರು ಸತ್ತ ಬಳಿಕವೇ ನಗರಸಭೆ ತನ್ನ ಕೆಲಸ ಮಾಡುತ್ತದೆಯೇ ಎಂದು ಸದಸ್ಯರೊಬ್ಬರು ಕೇಳಿದ ಪ್ರಶ್ನೆ ನಗರಸಭೆ ವಿಶೇಷ ಸಭೆಯಲ್ಲಿ ಭಾರಿ ಗದ್ದಲ ಸೃಷ್ಟಿಸಿದ್ದಲ್ಲದೆ, ಚರ್ಚೆಗೆ ಕಾರಣವಾಯಿತು. ನಗರದಲ್ಲಿ ತಲೆದೋರಿರುವ ಕಲುಷಿತ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಚರ್ಚಿಸಲು ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿತ್ತು.

13ನೇ ವಾರ್ಡ್ ಸದಸ್ಯ ಜಿ.ಎಸ್.ಹನುಮಂತಪ್ಪ ಮಾತನಾಡಿ, ಕಳೆದ ಒಂದು ವರ್ಷದಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಲುಷಿತ ನೀರು ಪೂರೈಕೆ ಕುರಿತು ಸಾಮಾನ್ಯ ಸಭೆಗಳಲ್ಲಿ ಗಮನ ಸೆಳೆದರೂ, ಅಧಿಕಾರಿಗಳು ಸ್ಪಂದಿಸಲಿಲ್ಲ. ಪರಿಣಾಮ ಓರ್ವ ಅಮಾಯಕ ಮಹಿಳೆ ಬಲಿಯಾಗಿದ್ದಾರೆ. ಏನಾದರೂ ಅನಾಹುತ ಸಂಭವಿಸಿದರೆ ಮಾತ್ರ ನಗರಸಭೆ ಎಚ್ಚೆತ್ತುಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದರು.

ಇದರಿಂದ ತಬ್ಬಿಬ್ಬಾದ ಪೌರಾಯುಕ್ತ ಮನೋಹರ್, ಕಲುಷಿತ ನೀರು ಸೇವಿಸಿ ಮಹಿಳೆ ಮೃತಪಟ್ಟಿದ್ದಾಳೆಂದು ಯಾರು ಹೇಳಿದರು? ಆ ಬಗ್ಗೆ ವೈದ್ಯಕೀಯ ವರದಿಯೂ ಉಲ್ಲೇಖಿಸಿಲ್ಲ. ಬೇರೆ ಕಾರಣದಿಂದಲೂ ಮೃತಪಟ್ಟಿರಬಹುದು ಎಂದು ಸಮರ್ಥಿಸಿಕೊಳ್ಳುತ್ತಿದ್ದಂತೆ ಸದಸ್ಯರಾದ ರಾಘವೇಂದ್ರ, ಎಚ್.ಮುನ್ನಿ, ಶೇಕ್ಷಾವಲಿ, ಸಂತೋಷ, ಕಿರಣ್, ಹನುಮಂತಪ್ಪ ಸೇರಿ ಇತರರು ಪಕ್ಷಾತೀತವಾಗಿ ಪೌರಾಯುಕ್ತರ ವಿರುದ್ಧ ಮುಗಿಬಿದ್ದರು. ನಗರಸಭೆ ಬೇಜವಾಬ್ದಾರಿಯೇ ಈ ಅವಘಡಕ್ಕೆ ಕಾರಣ ಎಂದು ಒಪ್ಪಿಕೊಳ್ಳುವಂತೆ ತಾಕೀತು ಮಾಡಿದರು.

ಈ ವೇಳೆ ಪೌರಾಯುಕ್ತ ಮನೋಹರ್, ಉಪಾಧ್ಯಕ್ಷ ಆನಂದ ಎಲ್.ಎಸ್. ಮತ್ತು ಸದಸ್ಯರ ಮಧ್ಯೆ ಏರು ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಯಾರು ಏನು ಹೇಳುತ್ತಿದ್ದಾರೆಂಬುದು ಕೇಳದಂತಾಯಿತು.

ಇದಕ್ಕೂ ಮುನ್ನ ಮಾತನಾಡಿದ ಅನೇಕ ಸದಸ್ಯರು, ತಮ್ಮ ವಾರ್ಡ್‌ನಲ್ಲಿರುವ 247 ಅವ್ಯವಸ್ಥೆ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟರು. ಗುತ್ತಿಗೆ ಸಂಸ್ಥೆಯ ವೈಫಲ್ಯ, ಅಧಿಕಾರಿಗಳ ಅಲಕ್ಷೃವನ್ನು ತೀವ್ರವಾಗಿ ಖಂಡಿಸಿದರು. ಸದಸ್ಯೆ ಮುಮ್ತಾಜ್ ಬೇಗಂ ಮಾತನಾಡಿ, ಎಸ್.ಆರ್.ನಗರದಲ್ಲಿ ಯಾವ ಪೈಪ್ ಎಲ್ಲಿದೆ? ಎಂಬುದೇ ಗೊತ್ತಾಗುತ್ತಿಲ್ಲ. ಪ್ರತಿನಿತ್ಯ ಕಲುಷಿತ ನೀರಿನದ್ದೇ ಸಮಸ್ಯೆ. ಅತೀ ಹೆಚ್ಚು ಗರ್ಭಿಣಿಯರು, ಮಕ್ಕಳಿದ್ದಾರೆ. ಪರಿಸ್ಥಿತಿ ಹೀಗಾದರೆ ಹೇಗೆ? ಎಂದು ಪ್ರಶ್ನಿಸಿದರು. ಅದಕ್ಕೆ 247 ಯೋಜನೆಯ ಅಭಿಯಂತ ಆಂಜನಪ್ಪ, ಕಾಮಗಾರಿ ಪೂರ್ಣಗೊಳಿಸಲು ಮತ್ತಷ್ಟು ಸಮಯಾವಕಾಶ ಕೋರಿದರು.

ಇದರಿಂದ ಕೆರಳಿದ ಸದಸ್ಯರು, ಕಳೆದೊಂದು ವರ್ಷದಿಂದ ಇದೇ ರಾಗ ತೆಗೆಯುದ್ದೀರಿ. ನೀರಿನ ಸಮಸ್ಯೆ ಬಂದಾಗಲೆಲ್ಲ ಸಮಯ ಕೋರುತ್ತೀರಿ. ಹಾಗಾದರೆ, ಕೆಲಸ ಮಾಡುವುದು ಯಾವಾಗ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅದಕ್ಕೆ ದನಿಗೂಡಿಸಿದ ಎಚ್.ಮುನ್ನಿ, ಸಿದ್ದಲಿಂಗಪ್ಪ ಚೌಕಿ ಏರಿಯಾದಲ್ಲಿ ಕಲುಷಿತ ನೀರು ಸೇವನೆಯಿಂದ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆ ಸೇರಿದ್ದಾರೆ. ಬೆಳಗಾಗುತ್ತಿದ್ದಂತೆ ವಾರ್ಡ್‌ನ ಜನರು ನಮಗೆ ಹಿಡಿಶಾಪ ಹಾಕುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಸಂತೋಷ ಮಾತನಾಡಿ, 17ನೇ ವಾರ್ಡ್‌ನ ಜನರ ದುರದೃಷ್ಟವೋ ಏನೋ, ಮೊದಲ ಕೋವಿಡ್ ಕೇಸ್ ನಮ್ಮಲ್ಲೇ, ಕಲುಷಿತ ನೀರಿನಿಂದ ಮೊದಲು ಅಸ್ವಸ್ಥರಾಗಿದ್ದು ನಮ್ಮಲ್ಲೇ ಎಂದು ವಾರ್ಡ್‌ನ ನೀರು ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರು.

ಪೌರಾಯುಕ್ತ ಮನೋಹರ್ ಮಾತನಾಡಿ, ನಗರದಲ್ಲಿ ಕಲುಷಿತ ನೀರು ಸೇವನೆಯಿಂದ ಅನೇಕರು ಅಸ್ವಸ್ಥಗೊಂಡಿದ್ದರಿಂದ ಈ ಸಭೆ ಕರೆಯಲಾಗಿದೆ. ಅದಕ್ಕಾಗಿ ಕೆಯುಡಬ್ಲುೃಎಸ್, ನಗರಸಭೆ ಸೇರಿ ಮೂವರು ಅಭಿಯಂತರರ ಸಮಿತಿ ರಚಿಸಲಾಗಿದೆ. ಪ್ರತೀ ವಾರ್ಡ್‌ಗೆ ಭೇಟಿ ನೀಡಿ, ಪರಿಶೀಲಿಸುವರು. ಯುಜಿಡಿ, ಹಳೇ ಪೈಪ್, ಹೊಸ ಪೈಪ್‌ಲೈನ್‌ಗಳ ಲೋಪದೋಷಗಳನ್ನು ಪಟ್ಟಿ ಮಾಡಲಾಗುವುದು ಎಂದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ತಾರೀಹಳ್ಳಿ ಜಂಬುನಾಥ, ಮತ್ತಿತರೆ ಸದಸ್ಯರು ಉಪಸ್ಥಿತರಿದ್ದರು.

45 ದಿನದೊಳಗೆ ಸಮಸ್ಯೆಗೆ ಪರಿಹಾರ
ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಸರಿಪಡಿಸುವುದು, ಯುಜಿಡಿ ನೀರು ಕುಡಿಯುವ ನೀರಿನ ಪೈಪ್‌ಲೈನ್‌ಗಳಲ್ಲಿ ಸೇರ್ಪಡೆಯಾಗದಂತೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ಶಿಥಿಲಾವಸ್ಥೆಯಲ್ಲಿರುವ ಯುಜಿಡಿ ಗುಂಡಿಗಳನ್ನು ದುರಸ್ತಿ, ಮರು ನಿರ್ಮಾಣಕ್ಕೆ ಟೆಂಡರ್ ಅಗತ್ಯವಿಲ್ಲ. ನೀರು ಪೂರೈಕೆ ವ್ಯವಸ್ಥೆಯನ್ನು ಸರಿಪಡಿಸಲು ಎಷ್ಟು ಬೇಕಾದರೂ ಕೂಲಿ ಕಾರ್ಮಿಕರನ್ನು ಬಳಿಸಿಕೊಳ್ಳಬಹುದು. ಪೈಪ್‌ಲೈನ್ ದುರಸ್ತಿ, ಸಾಮಗ್ರಿಗಳ ಖರೀದಿಗೆ ಅನುದಾನದ ಕೊರತೆ ಇಲ್ಲ. ಸಮಾರೋಪಾದಿಯಲ್ಲಿ ಕಾಮಗಾರಿ ಕೈಗೊಂಡು ಮುಂದಿನ 45 ದಿನಗಳಲ್ಲಿ ನೀರಿನ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಪೌರಾಯುಕ್ತರ ಮನೋಹರ ಸಭೆಗೆ ಮಾಹಿತಿ ನೀಡಿದರು.

ಸರ್ಕಾರದ ಅನುದಾನವನ್ನು ಆತ್ಮಸಾಕ್ಷಿಯಾಗಿ ಸದ್ವಿನಿಯೋಗ ಮಾಡಬೇಕು. ಈ ಪರಿಸ್ಥಿತಿ ಮರುಕಳಿಸಿದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶುದ್ಧ ನೀರಿನ ಘಟಕಗಳಲ್ಲಿ ದರ ದುಪ್ಪಟ್ಟುಗೊಳಿಸಲಾಗಿದೆ. ಈ ಹಿಂದಿನ ದರದಲ್ಲಿ ನೀರು ಕೊಡುವಂತೆ ಪೌರಾಯುಕ್ತರು ಆದೇಶಿಸಬೇಕು.
| ಅಬ್ದುಲ್ ಖಾದೀರ್, ನಗರಸಭೆ ಸದಸ್ಯ, ಹೊಸಪೇಟೆ

ನಗರದಲ್ಲಿ 24*7 ಕುಡಿಯುವ ನೀರಿನ ಯೋಜನೆಯನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸಿದ ಮೆಸರ್ಸ್ ಎಸ್‌ಪಿಎಂಎಲ್ ಇನ್ಫ್ರಾ ಲಿ.ಗೆ ನೀಡಿದ್ದ ಗುತ್ತಿಗೆ ರದ್ದುಪಡಿಸಲಾಗಿದೆ. ಅದರ ಬ್ಯಾಂಕ್ ಠೇವಣಿ 5 ಕೋಟಿ ರೂ. ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೇ, ಸಂಸ್ಥೆಯ ವಿರುದ್ಧ ಐಪಿಸಿ 420 ಕಲಂ ಅಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
| ಮನೋಹರ, ಪೌರಾಯುಕ್ತ, ಹೊಸಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net