

ಹೊಸಪೇಟೆ: ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು. ಇಂದಿನ ಆಧುನಿಕ ಯುಗದಲ್ಲಿ ಇ-ಪುಸ್ತಕ, ಕಾಗದ ರಹಿತ ಇ-ಆಡಳಿತ ಬಳಕೆ ಅಗತ್ಯವಾಗಿದೆ. ಕಚೇರಿ ಕಾರ್ಯನಿರ್ವಹಣೆ ಸುಲಭ ಮತ್ತು ಸರಳವಾಗಲಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಗಣಕ ಕೇಂದ್ರ ಬುಧವಾರ ಆಯೋಜಿಸಿದ್ದ ಇ-ಆಫೀಸ್ ತಂತ್ರಾಂಶ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಗದ ರಹಿತ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕವಿವಿ ಅಧಿಕಾರಿ ಮತ್ತು ಸಿಬ್ಬಂದಿಗೆ ಇ-ಆಫೀಸ್ ತರಬೇತಿ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಪ್ರಮುಖವಾಗಿ ಯಾವುದೇ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಬಹಳಷ್ಟು ಸಮಯ ಬೇಕಾಗಿತ್ತು. ಆದರೆ, ಇಂದು ತಂತ್ರಜ್ಞಾನ ಬಳಕೆಯಿಂದ ಕ್ಷಣಮಾತ್ರದಲ್ಲಿ ಮಾಹಿತಿಯನ್ನು ನಮ್ಮ ಅಂಗೈಯಲ್ಲಿ ಪಡೆದುಕೊಳ್ಳಬಹುದು. ಈ ಮೂಲಕ ಪ್ರತಿಯೊಬ್ಬರೂ ಪ್ರಪಂಚದಾದ್ಯಂತ ನಡೆಯುವ ಪ್ರಚಲಿತ ವಿದ್ಯಾಮಾನಗಳ ಕುರಿತು ಇ-ತಂತ್ರಾಂಶದ ಸಹಾಯದ ಮೂಲಕ ಕ್ಷಣಮಾತ್ರದಲ್ಲಿ ತಿಳಿಯಬಹುದು. ಬಹು ಮುಖ್ಯವಾಗಿ ಇ-ಆಫೀಸ್ ತಂತ್ರಾಂಶದ ಮೂಲಕ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೆರವಾಗಿ ಜನರಿಗೆ ಲಭ್ಯವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಿ ಜಾರಿಗೆ ತರಲಾಗಿದೆ. ಜೀವನದಲ್ಲಿ ಕಲಿಕೆ ಎನ್ನುವುದು ನಿರಂತರವಾಗಿರಬೇಕು ಎಂದರು.
ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಪ್ರಾಸ್ತವಿಕ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯ ಇಷ್ಟು ವಷರ್ ದೇಶಿ ಆಡಳಿತ ವ್ಯವಸ್ಥೆಯಿಂದ ಕೂಡಿತ್ತು. ಬದಲಾದ ಕಾಲಘಟ್ಟದಲ್ಲಿ ಇ-ಆಡಳಿತ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇ-ಆಫೀಸ್ ತಂತ್ರಾಂಶಕ್ಕೆ ಹೊಂದಿಕೊಂಡು ಬದುಕಬೇಕಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಸೀಮಿತವಾಗಿದ್ದ ಇ-ತಂತ್ರಾಂಶ ಈಗ ವಿಶ್ವವಿದ್ಯಾಲಯಕ್ಕೂ ವಿಸ್ತರಿಸಿದೆ. ಈ ನಿಟ್ಟಿನಲ್ಲಿ ವಿವಿಯ ಎಲ್ಲ ಹಂತದ ಅಧಿಕಾರಿಗಳು, ಸಿಬ್ಬಂದಿ ಅಗತ್ಯ ತರಬೇತಿ ಪಡೆದು, ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಗಣಕ ಕೇಂದ್ರದ ಸಹಾಯಕ ನಿರ್ದೇಶಕ ಹಾಗೂ ಇ-ಆಫೀಸ್‌ನ ನೋಡಲ್ ಅಧಿಕಾರಿ ಎಸ್.ಕೆ. ವಿಜಯೇಂದ್ರ, ಸಹಾಯಕ ನೋಡಲ್ ಅಧಿಕಾರಿ ಶಕುಂತಲಾ ಚೌಡನಾಯ್ಕ, ವಿಜಯನಗರ ಇ-ಆಫೀಸ್ ಸಲಹೆಗಾರ ವಿದ್ಯಾಶ್ರೀ ಎನ್., ಕನ್ನಡ ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.