ಎರಡು ದಾನ ಶಾಸನ ಪತ್ತೆ

inscription
ಶಾಸನ ಪತ್ತೆ
Published on

ಹೊಸಪೇಟೆ: ತಾಲೂಕಿನ ಪಾಪಿನಾಯಕನ ಹಳ್ಳಿ ಹಾಗೂ ಕಾಕುಬಾಳ ಗ್ರಾಮದಲ್ಲಿ ವಿಜಯನಗರ ಕಾಲದ ಮತ್ತೆ ಎರಡು ದಾನ ಶಾಸನಗಳನ್ನು ವಿಜಯನಗರ ತಿರುಗಾಟ ಸಂಶೋಧನ ತಂಡ ಪತ್ತೆ ಮಾಡಿದೆ.

ಪಿಕೆಹಳ್ಳಿ ಅಂಕಾಲಮ್ಮ ದೇವಿಯ ದೇಗುಲದ ಎದುರಿಗೆ ಇರುವ ಹೊಲವೊಂದರಲ್ಲಿ ಕನ್ನಡ ತೆಲುಗು ತಮಿಳು ಮೂರು ಭಾಷೆಯ ತ್ರಿಭಾಷ ಲಿಪಿಯುಳ್ಳ ಶಾಸನವು ಪತ್ತೆಯಾಗಿದೆ. ಬಲಿಕಲ್ಲು ಎಂದು ಸ್ಥಳೀಯರು ದೇವಿಯ ಜಾತ್ರೆಯ ವೇಳೆಯಲ್ಲಿ ಕೋಣ ಬಲಿ ನೀಡುತ್ತಿದ್ದರಂತೆ. ದೇವಿಯ ಶಾಪದಿಂದ ಕಾಮುಕನೊಬ್ಬನು ಕಲ್ಲಾದ ಎಂಬ ನಂಬಿಕೆಯೂ ಇದೆ. ವಕ್ರವಾದ ಗ್ರಾನೈಟ್ ಕಲ್ಲಿನಲ್ಲಿ ಶಾಸನ ಬರೆಸಲಾಗಿದೆ. ಕೆಲವು ಸಾಲುಗಳ ಅಕ್ಷರ ಸವೆದು ಹೋಗಿವೆ.

ಶಿಲಾಶಾಸನದಲ್ಲಿ 14 ಸಾಲುಗಳಿವೆ. ಕನ್ನಡ, ತೆಲುಗು ಭಾಷೆಯ ದಪ್ಪ ಅಕ್ಷರಗಳಲ್ಲಿ ಬರೆಸಲಾಗಿದೆ. ಇದರಲ್ಲಿನ ಕೊನೆಯ ಎರಡು ಸಾಲುಗಳಲ್ಲಿ ತಮಿಳು ಲಿಪಿಯ ಅಕ್ಷರಗಳಿವೆ. ಆರಂಭದಲ್ಲಿ ಶ್ರೀ ಎಂಬ ದೊಡ್ಡ ಅಕ್ಷರವಿದ್ದು, ಇದರ ಎಡಕ್ಕೆ ಚಂದ್ರ, ಬಲಕ್ಕೆ ಸೂರ್ಯನ ಚಿಹ್ನೆಗಳಿವೆ. ಕೆಳ ಸಾಲಿನ ಅಕ್ಷರಗಳು 3 ಇಂಚು ಅಗಲ 5 ಇಂಚು ಎತ್ತರವಾಗಿವೆ ಎಂದು ತಂಡದ ಸದಸ್ಯ ಡಾ.ಗೋವಿಂದ ತಿಳಿಸಿದ್ದಾರೆ.

ಮತ್ತೊಂದು ದಾನ ಶಾಸನವು ಕಾಕುಬಾಳು ಬಳಿಯ ವಿ.ನಾಗಲಾಪುರ ಗ್ರಾಮದ ಹೊರವಲಯದ ಬನ್ನಿಮಹಾಂಕಾಳಿ ದೇಗುಲದ ಬಳಿ ದೊರಕಿದೆ. ಕಪ್ಪು ಗುಂಡುಕಲ್ಲಿನಲ್ಲಿ ಬರೆಸಲಾಗಿದೆ. ಈ ಶಾಸನದ ಮೇಲ್ಭಾಗದಲ್ಲಿ ಎಡಗಡೆ ಶಂಖ ಮತ್ತು ಬಲಗಡೆಗೆ ಚಕ್ರ ಹಾಗೂ ಮದ್ಯಭಾಗದಲ್ಲಿ ವಿಶೇಷವಾಗಿ ಮೂರು ನಾಮದ ಚಿಹ್ನೆಗಳಿರುವುದರಿಂದ, ಇದು ವೈಷ್ಣವ ಧರ್ಮವನ್ನು ಪ್ರತಿಪಾಧಿಸುವ ದಾನ ಶಾಸನವಾಗಿದೆ. ಇದು ಒಂಬತ್ತು ಸಾಲಿನ ಕನ್ನಡ ಭಾಷೆಯ ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಕಣಿವೆಯ ಮರಿಯಮ್ಮ ದೇವಿ ಮತ್ತು ಮುಕ್ತೇಶ್ವರ ದೇಗುಲಕ್ಕೆ ದಾನ ನೀಡಿದ ವಿವರವಿದೆ. ಇಲ್ಲಿ ಉಲ್ಲೇಖವಾದ ಕಣಿವೆ ಮರಿಯಮ್ಮ ದೇಗುಲವು ಕಂಪ್ಲಿ ದೇವಲಾಪುರ ಮಾರ್ಗ ಮದ್ಯೆದಲ್ಲಿದೆ. ಈ ಶಾಸನದಲ್ಲಿ ಬರೆಸಿರುವ ಒಂಬತ್ತು ಸಾಲುಗಳಲ್ಲಿನ ಕೆಲವು ಅಕ್ಷರಗಳು ಸವೆದು ಹೋಗಿವೆ.

ಈ ಎರಡು ಶಾಸನಗಳಲ್ಲಿ ಗ್ರಾಮ ದೇವತೆಯರ ಹೆಸರುಗಳು ಉಲ್ಲೇಖವಾಗಿವೆ. ಈ ಎರಡು ಶಾಸಗಳನ್ನು ಪಾಪಿನಾಯಕನ ಹಳ್ಳಿಯ ಅಂಕ್ಲೆಶ್,ಕಿರಣ್, ವಿ ನಾಗಲಾಪುರದ ರಾಮಚಂದ್ರಪ್ಪ ಅವರುಗಳ ಸಹಕಾರದಿಂದ ಸಂಶೋಧಕರಾದ ಎಚ್.ರವಿ, ಡಾ.ವೀರಾಂಜನೇಯ, ಪ್ರೊತಿಪ್ಪೇಸ್ವಾಮಿ, ಡಾ.ಗೋವಿಂದ, ಕೃಷ್ಣೆಗೌಡ ಇತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net