

ಹೊಸಪೇಟೆ: ಸಣ್ಣ-ಪುಟ್ಟ ತಾಂತ್ರಿಕ ಸಮಸ್ಯೆ ಹೊರತು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ಶಾಂತಿಯುತ ಮತದಾನ ನಡೆಯಿತು. ವಿಜಯನಗರ, ಎಚ್.ಬಿ.ಹಳ್ಳಿ, ಹಡಗಲಿ, ಹರಪನಹಳ್ಳಿ ಹಾಗೂ ಕೂಡ್ಲಿಗಿ ಒಟ್ಟು ಐದು ಕ್ಷೇತ್ರಗಳಲ್ಲಿ ಶೇ.77.71 ಮತದಾನವಾಗಿದೆ. 55 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಮೇ 13ರಂದು ನಡೆಯಲಿರುವ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಬೆಳಗ್ಗೆ 6ಕ್ಕೆ ಪ್ರಾಯೋಗಿಕವಾಗಿ ಮತದಾನ ಪ್ರಕ್ರಿಯೆ ನಡೆಸಿ, 7ಗಂಟೆಗೆ ಸಾರ್ವಜನಿಕರಿಂದ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಸೂರ್ಯನ ಪ್ರಖರ ಹೆಚ್ಚುತ್ತಿರುವಂತೆ ಮತದಾನವೂ ತೀವ್ರಗೊಂಡಿತು. ನಗರದ ವಿವಿಧ ಮತಗಟ್ಟೆಗಳಲ್ಲಿ ಬೆಳಗ್ಗೆ 8ಗಂಟೆ ವೇಳೆ ಜನರ ಸಾಲು ಮಾರುದ್ದ ಬೆಳೆದಿದ್ದರೆ, ಇನ್ನೂ ಕೆಲವೆಡೆ ಅಷ್ಟಾಗಿ ಜನ ಸಂದಣಿ ಇರಲಿಲ್ಲ. ಮತದಾನಕ್ಕೆ ಆಗಮಿಸುವ ಹಿರಿಯ ನಾಗರಿಕರಿಗಾಗಿ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ವಿಜಯನಗರ ಶೇ.71.65 , ಎಚ್.ಬಿ.ಹಳ್ಳಿ ಶೇ.81.24, ಹಡಗಲಿ ಶೇ.77.31, ಹರಪನ ಹಳ್ಳಿ ಶೇ.79.66 ಹಾಗೂ ಕೂಡ್ಲಿಗಿ ಕ್ಷೇತ್ರದಲ್ಲಿ ಶೇ.79.48 ರಷ್ಟು ಮತದಾನ ದಾಖಲಾಗಿದೆ.
ಜಿಲ್ಲೆಯ ವಿವಿಧೆಡೆ ಬುಧವಾರ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ನಡೆಯಿತು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರು ತಂಡೋಪ ತಂಡವಾಗಿ ಬಂದು ಹಕ್ಕು ಚಲಾಯಿಸಿದರು. ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆಯಿಂದಲೇ ಮತದಾನ ಚುರುಕುಗೊಂಡಿದ್ದರೆ, ನಗರ ಪ್ರದೇಶದಲ್ಲಿ ಬೆಳಗ್ಗೆ 11 ಗಂಟೆ ಬಳಿಕ ವೇಗ ಪಡೆಯಿತು. ಎಲ್ಲೆಡೆ ಮಧ್ಯಾಹ್ನ ಕೊಂಚ ಮಂದವಾಗಿದ್ದ ಮತ ಚಲಾವಣೆ ಆನಂತರ ಬಿರುಸುಗೊಂಡಿತು.
ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆಗೆ ವರೆಗೆ ಶೇ.6.82 ಮತದಾನ ದಾಖಲಾಗಿದೆ. ಹೂವಿನಹಡಗಲಿ ಶೇ.5.57, ಹಗರಿಬೊಮ್ಮನಹಳ್ಳಿ ಶೇ.6.45, ವಿಜಯನಗರ ಶೇ.8.20, ಕೂಡ್ಲಿಗಿ ಶೇ.7.04, ಹರಪನಹಳ್ಳಿ ಶೇ.6.52 ಜನರು ಹಕ್ಕು ಚಲಾಯಿಸಿದರು. ಬೆಳಗ್ಗೆ 11 ಗಂಟೆಯವರೆ ಜಿಲ್ಲೆಯಲ್ಲಿ ಶೇ.21.21 ಮತಗಳು ದಾಖಲಾಯಿತು. ಹೂವಿನಹಡಗಲಿ ಶೇ.19.64, ಹಗರಿಬೊಮ್ಮನಹಳ್ಳಿ ಶೇ.19.14, ವಿಜಯನಗರ ಶೇ.23.95, ಕೂಡ್ಲಿಗಿ ಶೇ.20.75, ಹರಪನಹಳ್ಳಿಯಲ್ಲಿ ಶೇ.22.15 ಜನರು ಮತ ಹಾಕಿದರು.
ಮಧ್ಯಾಹ್ನ 1 ಗಂಟೆಯೊಳಗೆ ಒಟ್ಟು ಶೇ.39.60ರಷ್ಟು ಮತದಾನ ದಾಖಲಾಗಿದೆ. ಈ ಪೈಕಿ ಹೂವಿನಹಡಗಲಿಯಲ್ಲಿ ಶೇ.38.44, ಹಗರಿಬೊಮ್ಮನಹಳ್ಳಿಯಲ್ಲಿ ಶೇ.39.39, ವಿಜಯನಗರದಲ್ಲಿ ಶೇ.40.41, ಕೂಡ್ಲಿಗಿಯಲ್ಲಿ ಶೇ.38.12 ಹಾಗೂ ಹರಪನಹಳ್ಳಿ ಕ್ಷೇತ್ರದಲ್ಲಿ ಶೇ.41.51 ಮತದಾನವಾಯಿತು. 3 ಗಂಟೆವರೆಗೆ ಶೇ.56.18 ಮತದಾನ ದಾಖಲಾಗಿದ್ದು, ಹೂವಿನಹಡಗಲಿಯಲ್ಲಿ ಶೇ.55.8, ಹಗರಿಬೊಮ್ಮನಹಳ್ಳಿಯಲ್ಲಿ ಶೇ.55.86, ವಿಜಯನಗರದಲ್ಲಿ ಶೇ.53, ಕೂಡ್ಲಿಗಿಯಲ್ಲಿ ಶೇ.59.17, ಹರಪನಹಳ್ಳಿ ಕ್ಷೇತ್ರದಲ್ಲಿ ಶೇ.57.55 ಮತದಾನವಾಗಿದ್ದು, 6,13,524 ಜನ ಹಕ್ಕು ಚಲಾಯಿಸಿದರು. ಸಂಜೆ 6ಗಂಟೆ ವರೆಗೆ ಶೇ.77.71 ರಷ್ಟು ಮತಗಳು ಚಲಾವಣೆಯಾಗಿವೆ.
ಇದನ್ನೂ ಓದಿ:5.31 ಕೋಟಿ ಮತದಾರರು: ಮುಖ್ಯ ಚುನಾವಣಾಧಿಕಾರಿ ಮಾಹಿತಿ; 11.71 ಲಕ್ಷ ಯುವ ವೋಟರ್ಸ್
ಹೊಸಪೇಟೆ ತಾಲೂಕಿನ ಹೊಸೂರು ಮತಗಟ್ಟೆ ಸಂಖ್ಯೆ 185ರಲ್ಲಿ ಒಂದೇ ಹೆಸರು ಮತ್ತು ಎಪಿಕ್ ಸಂಖ್ಯೆಯಡಿ ಇಬ್ಬರಿಗೆ ವೋಟರ್ ಐಡಿ ವಿತರಣೆಯಾಗಿದ್ದರಿಂದ ಒಬ್ಬರು ಮತದಾನದಿಂದ ವಂಚಿತರಾದರು.
ಗ್ರಾಮದ ರಾಂಪುರ್ ಹುಲಿಗೆಮ್ಮ ಹೆಸರಿನ ಇಬ್ಬರು ಮತದಾರರಿಗೆ ಒಂದೇ ಸಂಖ್ಯೆ ಕಾರ್ಡ್ ವಿತರಣೆಯಾಗಿದ್ದವು. ಮೊದಲು ಬಂದವರಿಗೆ ಮತ ಚಲಾಯಿಸಲು ಅವಕಾಶ ನೀಡಿದ ಅಧಿಕಾರಿಗಳು, ನಂತರ ಬಂದವರಿಗೆ ನಿರಾಕರಿಸಿದರು. ಇದೇ ಮತಗಟ್ಟೆಯ ತಳವಾರ ರಮೇಶ, ಕೆ.ಮಾರುತಿ ಹಾಗೂ ನಾಗೇನಹಳ್ಳಿಯ ಮತಗಟ್ಟೆ ಸಂಖ್ಯೆ 193ರಲ್ಲಿ ತಬಸುಮ್ ಎಂಬ ಯುವತಿ ಮತದಾನಕ್ಕೆ ಮುನ್ನವೇ ಮತ್ಯಾರೋ ಓಟ್ ಹಾಕಿದ್ದರಿಂದ ಮತದಾನದಿಂದ ವಂಚಿತರಾದರು. ನಾಗೇನಹಳ್ಳಿ ಗ್ರಾಮದ ಎರಡು ಮತಗಟ್ಟೆಗಳಲ್ಲಿ ಕೆಲವರಿಗೆ ಮತದಾನ ಕೈತಪ್ಪಿದ ಬಗ್ಗೆ ದೂರುಗಳು ಕೇಳಿ ಬಂದಿವೆ.
ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಅವರು ಕುಟುಂಬ ಸಮೇತ ನಗರದ ಪುಣ್ಯಮೂರ್ತಿ ಸರ್ಕಲ್‌ನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ವಿಂಟೇಜ್ ಕಾರಿನಲ್ಲಿ ಆಗಮಿಸಿ ಹಕ್ಕು ಚಲಾಯಿಸಿದರು. ಈ ವೇಳೆ ಸಚಿವ ಆನಂದ ಸಿಂಗ್ ವಾಹನ ಚಲಾಯಿಸಿ ಗಮನ ಸೆಳೆದರು.