ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ

Hosapete sports
ಹೊಸಪೇಟೆಯಲ್ಲಿ ಶನಿವಾರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬಾಲಕಿಯರ ವಾಲಿಬಾಲ್ ಪಂದ್ಯ ನಡೆಯಿತು.
Published on

ಹೊಸಪೇಟೆ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಪ್ರಭಾರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಹನುಮನಾಯ್ಕ ಚಾಲನೆ ನೀಡಿದರು.

ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಸ್ಪರ್ಧೆಗಳು ನಡೆದವು. 600ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಪುರುಷ, ಮಹಿಳಾ ಮತ್ತು ಬಾಲಕ, ಬಾಲಕಿಯರು ಭಾಗವಹಿಸಿದ್ದರು.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಾಕೀರ್ ಹುಸೇನ್, ತಾಲೂಕು ಅಧ್ಯಕ್ಷ ನಿಸಾರ್ ಅಹಮದ್, ದೈಹಿಕ ಶಿಕ್ಷಣ ಶಿಕ್ಷಕ ಎಂ.ರಹಮಾನ್, ಕ್ರೀಡಾ ಇಲಾಖೆ ನೋಡಲ್ ಅಧಿಕಾರಿ ಜಗದೀಶ್, ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ ಇತರರಿದ್ದರು.

ವಾಲಿಬಾಲ್, ಖೋ ಖೋ, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಶಟಲ್ ಬ್ಯಾಡ್ಮಿಂಟನ್, ಯೋಗ, ಹ್ಯಾಂಡ್ ಬಾಲ್, ಬಾಸ್ಕೆಟ್ ಬಾಲ್ ಸೇರಿ ವಿವಿಧ ಗುಂಪು ಕ್ರೀಡಾಕೂಟಗಳು ನಡೆದವು.
ಅಥ್ಲೆಟಿಕ್ಸ್ ವಿಭಾಗದಲ್ಲಿ 100 ಮೀಟರ್, 200 ಮೀಟರ್, 400 ಮೀ., 800 ಮೀ., 1500 ಮೀ., 3000 ಮೀ., ಐದು ಸಾವಿರ ಮೀ., ಹತ್ತು ಸಾವಿರ ಮೀಟರ್ ಓಟ ಸೇರಿದಂತೆ ಹರ್ಡಲ್ಸ್, ರೀಲೇ, ಎತ್ತರ ಜಿಗಿತ, ಉದ್ದ ಜಿಗಿತ, ತ್ರಿವಿಧ ಜಿಗಿತ, ಚಕ್ರ ಎಸೆತ, ಗುಂಡು ಎಸೆತ, ಭರ್ಚಿ ಎಸೆತ ಸ್ಪರ್ಧೆಗಳು ಮತ್ತು ಕುಸ್ತಿ, ಜೂಡೋ ಸ್ಪರ್ಧೆಗಳು ಕೂಡ ನಡೆದವು.

ಇಲ್ಲಿ ವಿಜೇತರಾದ ಕ್ರೀಡಾಪಟುಗಳು ಯಾದಗಿರಿ ಮತ್ತು ಬಳ್ಳಾರಿಯಲ್ಲಿ ನಡೆಯಲಿರುವ ವಿಭಾಗೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವರಿಗೆ ಪ್ರಮಾಣಪತ್ರ ಕೂಡ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net