ನಿರ್ಲಕ್ಷಿತ ಆಪರೇಟರ್‌ಳನ್ನು ವಜಾಗೊಳಿಸಿ

28 MANJU 05
Published on

ಹೊಸಪೇಟೆ: ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಜನನ-ಮರಣ ನೋಂದಣಿ ಪ್ರಕ್ರಿಯೆ ವಿಳಂಬವಾಗಿ ಮಾಹಿತಿ ನೀಡುವ ಮೂಲಕ ಪ್ರಮಾಣ ಪತ್ರಕ್ಕಾಗಿ ಕುಟುಂಬಸ್ಥರನ್ನು ಅಲೆದಾಡಿಸುತ್ತಿರುವುದು ಶೋಚನೀಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

ಜಿಲ್ಲೆಯಲ್ಲಿ ಜನನ ಮತ್ತು ಮರಣ ನೊಂದಾಣಿಗಳು ಕಳೆದ 7 ತಿಂಗಳಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಜನನ 1332, ಮರಣ 852 ಒಟ್ಟು 2184 ನೊಂದಾಣಿ ವಿಳಂಬವಾಗಿವೆ. ವಿನಾಕಾರಣ ಸರ್ವರ್ ಪ್ರಾಬ್ಲಂ ನೆಪ ಹೇಳಿ ಸಾರ್ವಜನಿಕರಿಗೆ ಅನಗತ್ಯ ಅಲೆದಾಡಿಸುತ್ತಿರುವ ಅನೇಕ ದೂರುಗಳು ಬಂದಿವೆ. ನಿರ್ಲಕ್ಷಿತ ಕಂಪ್ಯೂಟರ್ ಆಪರೇಟರ್‌ಗಳಿದ್ದರೇ ಅಂತಹ ಸಿಬ್ಬಂದಿಗಳನ್ನು ಕೂಡಲೇ ವಜಾಗೊಳಿಸಿ. ಬಾಣಂತಿ ಡಿಸ್ಚಾರ್ಜ್ ವೇಳೆಯಲ್ಲಿ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ನೀಡಬೇಕು. 21 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಪ್ರಮಾಣ ಪತ್ರಗಳನ್ನು ಕುಟುಂಬಸ್ಥರಿಗೆ ನೀಡುವಂತಾಗಲಿ. ಆಸ್ಪತ್ರೆಗಳಿಗೆ ಭೇಟಿ ನೀಡುವ ವೇಳೆ ಲೋಪ ಕಂಡು ಬಂದರೆ, ಮುಲಾಜಿಲ್ಲದೇ ಕ್ರಮಕೈಗೊಳ್ಳುವೆ ಎಂದು ಎಚ್ಚರಿಸಿದರು.

ಮುಂಗಾರು ಸಾಲಿನಲ್ಲಿ ಒಟ್ಟು 103495 ರೈತರು ನೊಂದಾಯಿಸಿದ್ದಾರೆ. 89561.9 ಹೆಕ್ಟರ್ ವಿಸ್ತೀರ್ಣ ಕೃಷಿ ಭೂಮಿಗೆ ವಿಮಾ ನೊಂದಾಯಿಸಲಾಗಿದೆ. ಒಟ್ಟು 52021.89 ಲಕ್ಷ ರೂ.ಗಳ ವಿಮಾ ಮೊತ್ತ ಹಾಗೂ 1066.31 ಲಕ್ಷ ರೂ.ಗಳ ವಿಮಾ ಕಂತು ಪಾವತಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಮೊಟ್ಟ ಮೊದಲನೇ ಬಾರಿಗೆ ಈ ಪ್ರಗತಿ ಸಾಧನೆಯಾಗಿದೆ ಎಂದು ಶ್ಲಾಘಿಸಿದರು.

ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನನ ಮತ್ತು ಪ್ರಮಾಣ ಪತ್ರಗಳನ್ನು ಆಯಾ ಗ್ರಾಪಂಗಳಲ್ಲಿ ನೀಡಲಾಗುವುದು. ವಿತರಣೆಯಲ್ಲಿ ಯಾವುದೇ ವಿಳಂಬ ಮಾಡದಂತೆ ನಿಗಾ ವಹಿಸಬೇಕು. ವಿಮಾ ಕಂಪನಿಯ ಅಧಿಕಾರಿಗಳ ಸಹಯೋಗದಲ್ಲಿ ಬೆಳೆ ಕಟಾವು ಪ್ರಯೋಗದ ಸಂದರ್ಭದಲ್ಲಿ ಕಡ್ಡಾಯವಾಗಿ ನಿಯಾಮಾನುಸಾರ ಪ್ರಯೋಗ ಕೈಗೊಳ್ಳಬೇಕು ಎಂದರು.

ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ಕೆ.ಪತ್ರಿಬಸಪ್ಪ, ಜಂಟಿ ಕೃಷಿ ನಿರ್ದೇಶಕ ಜಿ.ಟಿ.ಮಂಜುನಾಥ, ಡಿಡಿ ನಯೀಮ್ ಪಾಷಾ, ತೋಟಗಾರಿಕೆ ಉಪನಿರ್ದೇಶಕ ಪಿ.ಜಿ.ಚಿದಾನಂದಪ್ಪ, ರೇಷ್ಮೇ ಉಪನಿರ್ದೇಶಕ ವಿ.ಸುಧೀರ್, ಜಿಲ್ಲಾ ಕುಷ್ಟರೋಗ ಅಧಿಕಾರಿ ಡಾ.ರಾಧಿಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net