ಹಂಪಿ ಉತ್ಸವ ಅದ್ದೂರಿ ಆಚರಣೆಗೆ ಸಿದ್ಧತೆ ಕೈಗೊಳ್ಳಿ

22 HPT 1
Published on

ಹೊಸಪೇಟೆ: ಹಂಪಿ ಉತ್ಸವ ಆಚರಣೆಗೆ ನಿಯೋಜನೆಗೊಂಡ ವಿವಿಧ ಸಮಿತಿಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಎಲ್ಲಾ ರೀತಿಯಿಂದಲೂ ಅಚ್ಚುಕಟ್ಟಾಗಿ ಮುತುವರ್ಜಿ ವಹಿಸಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಂಪಿ ಉತ್ಸವ ಆಚರಣೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಂಪಿ ಉತ್ಸವಕ್ಕೆ ನಿರ್ಮಿಸಲಾದ ನಾಲ್ಕು ವೇದಿಕೆಗಳು ಒಳಗೊಂಡಂತೆ ಎಲ್ಲಾ ರೀತಿಯ ವಸ್ತು ಪ್ರದರ್ಶನ ಮಳಿಗೆಗಳು, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ಧತೆ ಮತ್ತು ಪೂರಕ ಸೌಲಭ್ಯ ಒದಗಿಸುವಲ್ಲಿ ಲೋಪವಾಗದಂತೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಆದೇಶಿಸಿದರು.

ಹಂಪಿ ಉತ್ಸವದ ಮುನ್ನ ದಿನ ಜ.26ರಂದು ಸಂಜೆ ನಗರದಲ್ಲಿ ವಸಂತ ವೈಭವ ಮೆರವಣಿಗೆ ನಡೆಯಲಿದ್ದು, ವಿವಿಧ ಕಲಾತಂಡಗಳು ಸೇರಿದಂತೆ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲೆಯ ವಿವಿಧ ತಾಲೂಕಿನಿಂದ ಆಶಾ ಕಾರ್ಯಕರ್ತೆಯರನ್ನು ಕರೆತರಲು ಸಾರಿಗೆ ಸೌಲಭ್ಯ ಒದಗಿಸಬೇಕು. ಕಲಾವಿದರಿಗಾಗಿ ಸೂಕ್ತ ವ್ಯವಸ್ಥೆ ಕೈಗೊಳ್ಳಲು ನಿರ್ದೇಶಿಸಿದರು.

ನಗರದಲ್ಲಿ ವಸಂತ ವೈಭವ ಮತ್ತು ಲೇಸರ್ ಶೋ: ಹಂಪಿ ಉತ್ಸವದ ಮುನ್ನ ದಿನ ಜ.26ರಂದು ಸಂಜೆ 4 ಗಂಟೆಯಿಂದ ನಗರದ ವಡಕರಾಯ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ಕಲಾತಂಡಗಳ ನೂರಾರು ಕಲಾವಿದರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಮುಖ್ಯರಸ್ತೆಗಳಿಂದ ಸಾಗಿಬರುವ ಮೆರವಣಿಗೆ ಮುನ್ಸಿಪಲ್ ಮೈದಾನ ತಲುಪಲಿದೆ. ನಂತರ ಮೈದಾನದಲ್ಲಿ ಲೇಸರ್ ಶೋ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಾಥಮಿಕ ಚಿಕಿತ್ಸೆ, ಕುಡಿಯುವ ನೀರಿನ ವ್ಯವಸ್ಥೆ: ಉತ್ಸವದ ಅಂಗವಾಗಿ ಕಾರ್ಯಕ್ರಮ ನಡೆಯಲಿರುವ ವೇದಿಕೆಗಳು ಸೇರಿದಂತೆ ಹಂಪಿಯ ವಿವಿಧೆಡೆ ಒಟ್ಟು 13 ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಬೇಕು. ಅದೇ ರೀತಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಗೃಹ ವ್ಯವಸ್ಥೆ ಕೈಗೊಂಡು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಲು ಕ್ರಮಕೈಗೊಳ್ಳಲು ತಿಳಿಸಿದರು.

ಫಲಪುಷ್ಪ ಪ್ರದರ್ಶನ: ಹಂಪಿ ಉತ್ಸವದ ಭಾಗವಾಗಿ ಕೃಷಿ ದರ್ಶನ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಅದರೊಂದಿಗೆ ಕುಸ್ತಿ, ಸಾಹಸ ಕ್ರೀಡೆ ಸೇರಿ ವಿವಿಧ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವ ಜೊತೆಗೆ ವಿಶೇಷವಾಗಿ ಅಂಗವಿಕಲರಿಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಬೇಕು. ಕಲಾತಂಡಗಳಿಂದ ಕೈಗೊಳ್ಳಲಾಗುವ ಜಾನಪದ ವಾಹಿನಿ ಹಾಗೂ ತುಂಗಾರತಿ ಧಾರ್ಮಿಕ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧತೆಯನ್ನು ಕೈಗೊಳ್ಳಲು ಸೂಚಿಸಿದರು. ಹಂಪಿ ಉತ್ಸವದಲ್ಲಿ ಪುಸ್ತಕ ಪ್ರದರ್ಶನ, ಕವಿಗೋಷ್ಠಿ, ವಿಚಾರ ಸಂಕಿರಣ, ಚಿತ್ರಕಲೆ, ಶಿಲ್ಪಕಲೆ, ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನಕ್ಕೆ ಸಿದ್ಧತೆ ಹಾಗೂ ಶಾಲಾ ಮಕ್ಕಳಿಗೆ ಪ್ರಬಂಧ, ಚರ್ಚಾ ಸ್ಪರ್ಧೆಗಳ ಆಯೋಜನೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು.

ನಗರದಲ್ಲೂ ವಿದ್ಯುತ್ ದೀಪಾಲಂಕಾರ: ನೂತನ ಜಿಲ್ಲೆಯಾದ ನಂತರ ಮೊಟ್ಟಮೊದಲ ಬಾರಿಗೆ ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದ್ದು, ಜಿಲ್ಲಾ ಕೇಂದ್ರ ಹೊಸಪೇಟೆ ನಗರ ಸೇರಿದಂತೆ ಹಂಪಿಗೆ ತೆರಳುವ ಮಾರ್ಗಗಳಿಗೂ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರನಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ್ ಹಾಗೂ ತಹಸೀಲ್ದಾರ್ ವಿಶ್ವಜೀತ್ ಮೆಹ್ತಾ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net