ಅಂಗವಿಕಲರಿಗೆ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

20 MANJU 02
Published on

ಹೊಸಪೇಟೆ: ಅಂಗವಿಕಲರನ್ನು ಗೌರವದಿಂದ ಕಾಣುತ್ತಾ, ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸುವುದು ಮುಖ್ಯ. ಎಲ್ಲರ ಸಮಾನತೆ ಮತ್ತು ಒಳಗೊಳ್ಳುವಿಕೆಯ ಮೂಲಕ ನಿಜವಾದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ಬುಧವಾರ ನಡೆದ ವಿಕಲಚೇತನರ ಕಾರ್ಯಕ್ರಮ ಅನುಷ್ಠಾನ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಕಲಚೇತನರ ಸ್ವ-ಸಹಾಯ ಸಂಘಗಳು ವಿಕಲಚೇತನರಿಗೆ ಸಮುದಾಯ ಆಧಾರಿತ ಸಹಾಯ ವ್ಯವಸ್ಥೆ ಒದಗಿಸುವ ಪ್ರಮುಖ ತಾಣಗಳಾಗಿವೆ. ಹಾಗೂ ವಿಕಲಚೇತನರ ಆರ್ಥಿಕ, ಸಾಮಾಜಿಕ ಮತ್ತು ಮಾನಸಿಕ ಸ್ಥಿತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗುತ್ತವೆ. ಜಿಲ್ಲೆಯಲ್ಲಿ ಒಟ್ಟು 107 ವಿಕಲಚೇತನರ ಸ್ವ-ಸಹಾಯ ಸಂಘಗಳಿದ್ದು, ಅವುಗಳಲ್ಲಿ 75 ಸಂಘಗಳು ಬ್ಯಾಂಕ್ ಖಾತೆ ಹೊಂದಿವೆ, ಇನ್ನುಳಿದ ಸಂಘಗಳು ಅಗತ್ಯ ಮಾಹಿತಿ ನೀಡಿ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಸ್ವ-ಸಹಾಯ ಸಂಘಗಳು ಎನ್.ಆರ್.ಎಲ್.ಎಂ. ನಲ್ಲಿ ನೊಂದಣಿ ಮಾಡಿಸಿದರೆ ಸಂಘಗಳಿಗೆ ಅಗತ್ಯ ಸಾಲ, ಸೌಲಭ್ಯ ದೊರೆಯುತ್ತದೆ. ಜಿಲ್ಲೆಯಲ್ಲಿನ ಸಂಘಗಳ ಪೈಕಿ 51 ಸಂಘಗಳು ಮಾತ್ರ ನೊಂದಣಿ ಮಾಡಿಸಿಕೊಂಡಿವೆ, ಉಳಿದ ಸಂಘಗಳು ನೊಂದಣಿ ಮಾಡಿಸಿಕೊಳ್ಳಬೇಕು. ಅಂಗವಿಕಲರು ಪಡಿತರ ಚೀಟಿಯಿಂದ ವಂಚಿತರಾಗಬಾರದು, ಯಾರಿಗೆ ಪಡಿತರ ಚೀಟಿ ಇಲ್ಲವೋ ಅಂತವರಿಗೆ ತಕ್ಷಣ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪಡಿತರ ಚೀಟಿ ಮಾಡಿಸಿಕೊಡಬೇಕು ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವಿನಾಶ್ ಲಿಂಗ .ಎಸ್.ಗೋಟಕಿಂಡಿ ಮಾತನಾಡಿ, ಡಿ.03 ರಂದು ನಡೆಯುವ ವಿಶ್ವ ವಿಕಲಚೇತನರ ದಿನಾಚರಣೆಯ ನಿಮಿತ್ತ ವಿಲಕಚೇತನರಿಗೆ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇನ್ನಿತರ ಚಟವಟಿಕೆಗಳನ್ನು ಮಾಡಿಸಿ ಅವರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಅದಕ್ಕೆ ಬೇಕಾಗುವ ವಿವಿಧ ಸೌಲಭ್ಯಗಳನ್ನು ಒದಗಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net