

ಹೊಸಪೇಟೆ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.
ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಜಿಲ್ಲೆಯಲ್ಲಿ 28 ಸಾವಿರ ಇ-ಸ್ವತ್ತುಗಳನ್ನು ಮನೆ ಬಾಗಿಲಿಗೆ ನೀಡುವ ಕಾರ್ಯದಲ್ಲಿ ಎಲ್ಲ ಸಿಬ್ಬಂದಿ ಸಹಕಾರವಿದೆ. ಎರಡು ಬಾರಿ ಹಂಪಿ ಉತ್ಸವ ಹಾಗೂ ರಾಜ್ಯ ಸರ್ಕಾರದ ಸಾಧನ ಸಮಾವೇಶ ಯಶಸ್ವಿಯಾಗುವಲ್ಲಿ ಅಧಿಕಾರಿಗಳು ನೀಡಿರುವ ಸಹಕಾರ ಅನನ್ಯ ಎಂದರು.
ಕಣ್ಣಿಗೆ ಕಂಡ ಸಮಸ್ಯೆಗಳಿಗೆ ಪರಿಹರಿಸಲು ಮೊದಲನೇ ಆದ್ಯತೆ ನೀಡಿರುವೆ. ಗ್ರಾಮೀಣ ಜನರ ಸಮಸ್ಯೆಗಳಿಗೆ ವಿಳಂಬ ಮಾಡದೆ ಕೆಲಸ ಮಾಡಿಕೊಡುವುದು ಕರ್ತವ್ಯವಾಗಿದೆ. ಸಾರ್ವಜನಿಕರಿಗೆ ಸುಳ್ಳು ಹೇಳಿ ಅಲೆದಾಡಿಸಬೇಡಿ. ಕಚೇರಿಗೆ ಬರುವ ಬಡಜನರ ಆಶೋತ್ತರಗಳನ್ನು ನಿರಂತರವಾಗಿ ಆಲಿಸಿ ಸಾಂತ್ವನ ಮತ್ತು ಸಹಾಯ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ರಾಜ್ಯದಲ್ಲಿ ವಿಜಯನಗರ ಜಿಲ್ಲೆ ತನ್ನದೇ ಆದ ವಿಶೇಷ ಸ್ಥಾನಮಾನ ಪಡೆದಿದೆ. ಎಂ.ಎಸ್.ದಿವಾಕರ ಅವರಿಗೆ ನೀಡಿದ ಸಹಕಾರ ನಮಗೂ ನೀಡಿ. ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡೋಣ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ಜಿ.ಚಿದಾನಂದಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಜಿಪಂ ಯೋಜನಾ ಸಂಯೋಜಕ ಜೆ.ಎಂ.ಅನ್ನದಾನಸ್ವಾಮಿ ಇತರರಿದ್ದರು.