

ಹೊಸಪೇಟೆ: ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಿ ಬೆಳಸುವ ನಿಟ್ಟಿನಲ್ಲಿ ಜನರನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸುತ್ತಿದ್ದು, ನಮ್ಮ ಹಕ್ಕಿಗಾಗಿ ಪ್ರಜಾಪ್ರಭುತ್ವ ಉಳಿಸುವುದು ಎಲ್ಲರ ಜವಾಬ್ದಾರಿ ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ಪ್ರಜಾಪ್ರಭುತ್ವ ಮಾನವ ಸರಪಳಿ ನಿಮಿತ್ತ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಪರಸ್ಪರ ಮುಟ್ಟಿಕೊಳ್ಳುವುದೆ ಸಮಸ್ಯೆಯಾಗಿರುವ ಈ ಸಮಾಜದಲ್ಲಿ ಕೈಗೆ ಕೈಕೊಟ್ಟು ನಿಲ್ಲುವ ಮೂಲಕ ಈ ಕಾರ್ಯಕ್ರಮ ಹಮ್ಮಿಕೊಳಲಾಗಿದೆ ಎಂದರು.
ಅಸ್ಪೃಶ್ಯತೆಯನ್ನು ಮಹಾಶಾಪವೆಂದು ಬಣ್ಣಿಸಿದ್ದನ್ನು ನೆನಪಿಸಿಕೊಂಡರೆ, ಪ್ರಸ್ತುತ ರಾಜ್ಯಾದ್ಯಂತ ಸುಮಾರು ಎರಡೂವರೆ ಸಾವಿರ ಕಿ.ಮೀ. ಉದ್ದ ಮಾನವ ಸರಪಳಿಯ ನಿರ್ಮಾಣ ಮಾಡಲಾಗಿದೆ. ಸರ್ಕಾರವು ಇಂತಹ ಮಹತ್ವದ ಯೋಜನೆಯೊಂದನ್ನು ರೂಪಿಸಿದೆ. ಇದು ಜನಪರವಾದ ಆಂದೋಲನವಾಗಿ ರೂಪುಗೊಳ್ಳಬೇಕಾದಲ್ಲಿ ಆಡಳಿತ ಯಂತ್ರದ ಜವಾಬ್ದಾರಿ ದೊಡ್ಡದಾಗಿರುತ್ತದೆ. ಆಡಳಿತ ಯಂತ್ರವು ಸರ್ಕಾರದ ಆಶಯವನ್ನು ಅರ್ಥೈಸಿಕೊಂಡು ಇದರ ಪ್ರಾಮುಖ್ಯತೆಯ ಅರಿವನ್ನು ಜನ ಸಾಮಾನ್ಯರಲ್ಲಿ ಮೂಡಿಸುವ ಮೂಲಕ ಈ ಜನಾಂದೋಲನ ಉದ್ದೇಶವಾಗಿದೆ ಎಂದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಪ್ರಜಾಪ್ರಭುತ್ವ ಮನುಕುಲ ಕಂಡುಕೊಂಡ ಮಹತ್ವದ ಆಡಳಿತ ವ್ಯವಸ್ಥೆಯಾಗಿದ್ದು, ಈ ವ್ಯವಸ್ಥೆ ಮನುಷ್ಯನ ವೈಯಕ್ತಿಕ ವಿಕಾಸದ ಜತೆಯಲ್ಲಿ ಸಾಮಾಜಿಕ, ಆರ್ಥಿಕ ವಿಕಾಸಕ್ಕೆ ಬಹುಮುಖ್ಯ ಕೊಡುಗೆಯನ್ನು ಕೊಟ್ಟಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಜಗತ್ತಿನ ಅತ್ಯುತ್ತಮ ಗ್ರಂಥಗಳಲ್ಲಿ ಒಂದಾಗಿದ್ದು, ಸಮರ್ಥ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೀಡಿರುವ ಈ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಎಸ್‌ಪಿ ಶ್ರೀಹರಿಬಾಬು ಬಿ.ಎಲ್., ಜಿ.ಪಂ. ಸಿಇಒ ನೋಂಗ್ಜಾಯ್ ಮಹಮದ್ ಅಲಿ ಅಕ್ರಂ ಶಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಹುಡಾ ಅಧ್ಯಕ್ಷ ಎನ್.ಎನ್.ಎಪ್.ಇಮಾಮ್ ನಿಯಾಜಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಚ್.ವಿ. ಮಂಜುನಾಥ್ ಇದ್ದರು.