

ಹೊಸಪೇಟೆ: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಎರಡೂ ಹಬ್ಬಗಳು ಏಕಕಾಲಕ್ಕೆ ಬಂದಿರುವುದರಿAದ ಎಲ್ಲರೂ ಪರಸ್ಪರ ಸ್ನೇಹ ಭಾವನೆ ಹಾಗೂ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂದು ಜಿಲ್ಲಾದಿಕಾರಿ ಎಂ.ಎಸ್.ದಿವಾಕರ ಹೇಳಿದರು.
ನಗರದ ಜಿಲ್ಲಾ ಒಳಕ್ರೀಡಾಂಗಣ ಸಭಾಂಗಣದಲ್ಲಿ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.
ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಜಿಲ್ಲೆಗೆ ಕಳಂಕ ಬಾರದ ರೀತಿಯಲ್ಲಿ ಎಲ್ಲ ಧರ್ಮೀಯರೂ ಸೇರಿ ಕಾನೂನು ಸುವ್ಯವಸ್ಥೆಗೆ ಹಾಗೂ ಕೋಮು ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಆಚರಿಸಬೇಕು. ಹಬ್ಬ ಆಚರಣೆ ವೇಳೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಆಸ್ಪತ್ರೆ, ಶಾಲೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಗಣೇಶ ಪ್ರತಿಷ್ಠಾಪನೆಗೆ ಅಗತ್ಯವಿರುವ ಸ್ಥಳ, ಪೆಂಡಾಲ್, ವಿದ್ಯುತ್ ಸಂಪರ್ಕ ಇತರೆ ಪರವಾನಿಗೆಗಳನ್ನು ಏಕಗವಾಕ್ಷಿ ಪದ್ಧತಿಯಡಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶುಭಾಶಯ ಕೋರುವ ಬ್ಯಾನರ್, ಬಂಟಿAಗ್‌ಗಳನ್ನು ಆಳವಡಿಸಲು ಆಯಾ ಸ್ಥಳೀಯ ಪ್ರಾಧಿಕಾರದಿಂದ ತಪ್ಪದೇ ಅನುಮತಿ ಪಡೆದುಕೊಳ್ಳಬೇಕು. ಪೆಂಡಾಲುಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಪರವಾನಿಗೆ ಪಡೆಯಬೇಕು. ಪರಿಸರ ಸ್ನೇಹಿ ಹಾಗೂ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಇಲಾಖೆಗಳಿಗೆ ಸಹಕಾರ ನೀಡಿ ಎರಡೂ ಹಬ್ಬಗಳು ಶಾಂತಿ ಸೌಹಾರ್ದತೆಯಿಂದ ಆಚರಿಸೋಣ ಎಂದರು.
ಎಸ್ಪಿ ಅರುಣಾಂಗ್ಷು ಗಿರಿ ಮಾತನಾಡಿ, ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಭಾವೈಕ್ಯತೆಯಿಂದ ಆಚರಿಸಬೇಕು. ಗಣೇಶ ಪ್ರತಿಷ್ಠಾಪನೆಯ ಪೆಂಡಾಲ್‌ಗಳಲ್ಲಿ ಅಗ್ನಿನಂದಕಗಳನ್ನು ಬಳಕೆ ಮಾಡಬೇಕು. ಪೆಂಡಾಲ್‌ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಪೊಲೀಸ್ ಇಲಾಖೆಯಿಂದ ನಿಯಮಗಳ ಪಾಲನೆ ಹಾಗೂ ಪರವಾನಿಗೆ ಕಡ್ಡಾಯ. ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಎಲ್ಲರೂ ಶಾಂತಿ, ಸಂಯಮದಿAದ ವರ್ತಿಸಿ, ಕಾನೂನು ಸುವ್ಯವಸ್ಥೆ ಉಲ್ಲಂಘನೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಎಎಸ್ಪಿ ಮಂಜುನಾಥ, ಡಿವೈಎಸ್ಪಿಗಳಾದ ಟಿ.ಮಂಜುನಾಥ, ವೆಂಕಟಪ್ಪ ನಾಯಕ ಇತರರಿದ್ದರು.