

ಹೊಸಪೇಟೆ: ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇವರಿಗೆ ಸ್ವಾಗತ ಕಾರ್ಯಕ್ರಮ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆಯಿತು.
ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಜಿಲ್ಲೆಯಲ್ಲಿ 28 ಸಾವಿರ ಇಸ್ವತ್ತುಗಳನ್ನು ಮನೆ ಬಾಗಿಲಿಗೆ ನೀಡುವ ಮೂಲಕ ಗಮನಸೆಳೆದಿರುವುದಕ್ಕೆ ಎಲ್ಲಾ ಸಿಬ್ಬಂದಿಗಳ ಸಹಕಾರವಿದೆ. ಎರಡು ಬಾರಿ ಹಂಪಿ ಉತ್ಸವ ಹಾಗೂ ರಾಜ್ಯ ಸರ್ಕಾರದ ಸಾಧಾನ ಸಮಾವೇಶ ಯಶಸ್ವಿಯಲ್ಲಿ ಕೂಡಲ ಅಧಿಕಾರಿಗಳು ನೀಡಿರುವ ಸಹಕಾರ ಅನನ್ಯ. ಕಣ್ಣಿಗೆ ಕಂಡ ಸಮಸ್ಯೆಗಳಿಗೆ ಪರಿಹರಿಸಲು ಮೊದಲನೇ ಆದ್ಯತೆ ನೀಡುತ್ತಿದ್ದೆ. ಗ್ರಾಮೀಣ ಜನರ ಸಮಸ್ಯೆಗಳಿಗೆ ಆಡಳಿತ ಸೇವೆ ವಿಳಂಬ ಮಾಡದೆ ಕೆಲಸ ಮಾಡಿಕೊಡುವುದು ಕರ್ತವ್ಯವಾಗಿದೆ. ಸಾರ್ವಜನಿಕರಿಗೆ ಸತ್ಯ ಹೇಳಿ, ಸುಳ್ಳಿಂದ ಅಲೆದಾಡಿಸಬೇಡಿ. ಕಚೇರಿಗೆ ಬರುವ ಬಡಜನರ ಆಶೋತ್ತರಗಳನ್ನು ನಿರಂತರವಾಗಿ ಆಲಿಸಿ ಸಾಂತ್ವಾನ ಮತ್ತು ಸಹಾಯ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದರು.
ನೂತನ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ರಾಜ್ಯದಲ್ಲಿ ವಿಜಯನಗರ ಜಿಲ್ಲೆ ತನ್ನದೇ ಆದ ವಿಶೇಷ ಸ್ಥಾನಮಾನ ಪಡೆದಿದೆ. ಎಂ.ಎಸ್.ದಿವಾಕರ ಅವರಿಗೆ ನೀಡಿದ ಸಹಕಾರ ನಮಗೂ ನೀಡಿ. ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡೋಣ ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ಜಿ.ಚಿದಾನಂದಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ಡಿಡಿಪಿಯು ನೋಡೆಲ್ ಅಧಿಕಾರಿ ನಾಗರಾಜ್ ಹವಾಲ್ದಾರ್, ಜಿಪಂ ಯೋಜನಾ ಸಂಯೋಜಕ ಜೆ.ಎಂ.ಅನ್ನದಾನಸ್ವಾಮಿ ಇತರರು ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಕಾರ್ಯವೈಕರ ಶ್ಲಾಘಿಸಿದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ ಇತರರಿದ್ದರು.