

ಹೊಸಪೇಟೆ: ವಿಜಯನಗರ ಜಿಲ್ಲೆಯ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಾಗಿದ್ದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಎಸ್ಪಿ ಡಾ.ಅರುಣ್ ಕೆ. ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರಗತಿ ಪರ ಸಂಘಟನೆಗಳು ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದವು.
ಕಾಂಗ್ರೆಸ್ ಮುಖಂಡ ರಾಜಶೇಖರ ಹಿಟ್ನಾಳ್ ಮಾತನಾಡಿ, ಜಿಲ್ಲೆಯಲ್ಲಿ ಟೆಂಡರ್ ಇಲ್ಲದೇ ಕಾಮಗಾರಿಗಳು ನಡೆಯುತ್ತಿರುವ ಬಗ್ಗೆ ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ಗೆ ಮನವಿ ಸಲ್ಲಿಸಿತ್ತು. ತಕ್ಷಣ ಅದಕ್ಕೆ ಸ್ಪಂದಿಸಿದ್ದ ಅವರು, ಟೆಂಡರ್ ಇಲ್ಲದೆ ಕಾಮಗಾರಿ ನಿರ್ವಹಿಸದಂತೆ ಸಂಬಂಧಿಸಿದ ಇಲಾಖೆಗಳಿಗೆ ಆದೇಶ ಹೊರಡಿಸಿದ್ದರು. ಇದೇ ರೀತಿ ಜನರ ಸಮಸ್ಯೆಗಳಿಗೂ ತಕ್ಷಣಕ್ಕೆ ಸ್ಪಂದಿಸಿ ಧಕ್ಷತೆ ಮೆರೆದಿದ್ದಾರೆ.
ಎಸ್ಪಿ ಅರುಣ್ ಕೆ. ಕೂಡಾ ಖಡಕ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಕರಣವೊಂದರಲ್ಲಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ವಿರುದ್ದವೂ ಕೇಸ್ ದಾಖಲಿಸಿದ್ದಾರೆ. ಎಲ್ಲರಿಗೂ ಒಂದೇ ಕಾನೂನು ಎಂಬುದನ್ನು ತಮ್ಮ ಕಾರ್ಯವೈಖರಿಯಿಂದ ತೋರಿಸಿಕೊಟ್ಟಿದ್ದಾರೆ. ಇಂದಿನ ದಿನಮಾನಗಳಲ್ಲಿ ಇಂತಹ ಅಧಿಕಾರಿಗಳು ಅಪರೂಪ. ಮುಂದಿನ ಚುನಾವಣೆ ದೃಷ್ಟಿಯಿಂದ ದಕ್ಷ ಅಧಿಕಾರಿಗಳಿಗೆ ಸ್ಥಾನವನ್ನೂ ಸೂಚಿಸದೇ ವರ್ಗಾವಣೆ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಭಾಸ್ಕರ್ ರೆಡ್ಡಿ, ವೀರಸ್ವಾಮಿ, ಸೋಮಶೇಖರ ಬಣ್ಣದಮನೆ, ಜಂಬಯ್ಯ ನಾಯಕ, ಸತ್ಯಮೂರ್ತಿ, ಸುಧೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಯೋಗ ಲಕ್ಷ್ಮೀ ಇದ್ದರು.