

ಹೊಸಪೇಟೆ: ಸಿಎಂ ಸಿದ್ದರಾಮಯ್ಯ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ವಿವಾದ ಸೃಷ್ಟಿ ಮಾಡಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪ ಮಾಡಿದರು.
ನಗರದ ಮೇನ್ ಬಜಾರ್‌ನಲ್ಲಿನ ಹಿಂದು ಮಹಾ ಗಣಪತಿಗೆ ಗುರುವಾರ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಸ್ಲಿಂ ಸಮುದಾಯದವರ ಓಲೈಕೆ ಮಾಡಲು ಸಿಎಂ ಹೊರಟಿದ್ದಾರೆ. ಈ ಹಿಂದೆ ನಿಸಾರ್ ಅಹಮ್ಮದ್ ಅವರು ಉದ್ಘಾಟನೆ ಮಾಡಿದ್ದಾರೆ. ಆದರೆ ನಿಸಾರ್ ಅಹಮ್ಮದ್, ಅಬ್ದುಲ್ ಕಲಾಂ ಅವರನ್ನು ನಾವು ಒಂದು ಧರ್ಮ, ಜಾತಿಗೆ ಸೀಮಿತ ಮಾಡೋಕೆ ಆಗೋಲ್ಲ. ನಿಸಾರ್ ಅಹಮ್ಮದ್ ಅವರ ದೇಶಾಭಿಮಾನ, ರಾಜ್ಯಕ್ಕಾಗಿ ನೀಡಿದ ಕೊಡುಗೆ ಅಪಾರವಾಗಿದೆ. ಅದರೆ, ಬಾನು ಮುಷ್ತಾಕ್ ಕನ್ನಡಾಂಬೆ, ಕನ್ನಡ ಧ್ವಜದ ವಿರೋಧಿಯಾಗಿದ್ದಾರೆ. ಬಾನು ಮುಷ್ತಾಕ್ ಜತೆ ನಿಸಾರ್ ಅಹಮ್ಮದ್ ಹೋಲಿಸ ಬೇಡಿ ಎಂದರು.
ಟಿಪ್ಪು ಕೆಎಸ್‌ಅರ್ ಜಲಾಶಯ ಕಟ್ಟಿದ್ದರು ಎನ್ನುತ್ತಿದ್ದಾರೆ. ಅದಕ್ಕೆ ಪುರಾವೆಗಳಿಲ್ಲ, ನಾವು ನೋಡಿಲ್ಲ. ತುಂಗಭದ್ರಾ ಡ್ಯಾಂ ಗೇಟ್ ಕಿತ್ತು ಹೋಗಿದೆ, ಆದರೆ, ರಾಜ್ಯ ಸರ್ಕಾರದಿಂದ ರಿಪೇರಿ ಮಾಡೋಕೆ ಆಗುತ್ತಿಲ್ಲ. ಅಪಾರ ಪ್ರಮಾಣದ ನೀರು ಪೊಲಾಗಿದೆ. ಎರಡನೇ ಬೆಳೆಗೆ ನೀರು ಸಿಗೋಲ್ಲ ಅಂತ ಹೇಳಿದ್ದಾರೆ. ನಾನು ಹಿಂದೂ ಮಹಾಗಣಪತಿ ಮೂಲಕ ಕೇಳೋದಾದರೆ, ಆದಷ್ಟು ಬೇಗ ಕ್ರಸ್ಟ್ ಗೇಟ್ ಕೂಡಿಸುವ ಶಕ್ತಿ ನೀಡಲಿ ಎಂದು ಕೇಳುವೆ. ಈ ಭಾಗದ ಕಡೆ ಗಮನ ಹರಿಸಿ ಎಂದು ನಮ್ಮ ರಾಜ್ಯದ ಡಿಸಿಎಂ, ಜಲಸಂಪನ್ಮೂಲ ಸಚಿವರಿಗೆ ನಾನು ಮನವಿ ಮಾಡುವೆ ಎಂದರು.