

ಹೊಸಪೇಟೆ: ನಗರದಲ್ಲಿ ಗಾಳಿ ಸಹಿತ ಶುಕ್ರವಾರ ಧಾರಾಕಾರ ಸುರಿದ ಮಳೆಗೆ ಮರಗಳು ಸೇರಿದಂತೆ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ.
ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ಮಧ್ಯಾಹ್ನ ವೇಳೆ ದಟ್ಟವಾದ ಮೋಡಕವಿದು, ಸಂಜೆಯ ನಂತರ ಮಳೆ ಬಿರುಸುಗೊಂಡಿತು. ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.
ಭಾರಿ ಮಳೆಯಿಂದಾಗಿ ನಗರ ಪಟೇಲ್ ನಗರದಲ್ಲಿ ವಿದ್ಯುತ್ ಕಂಬ ಮುರಿದು ಮರದ ಸಹಿತ ಧರೆಗೆ ಉರುಳಿದೆ. ಇದರಿಂದಾಗಿ ಕಾರು ಹಾಗೂ ಆಟೋ ಹಾಗೂ ಮನೆ ಅಂಗಳದಲ್ಲಿನ ತಗಡಿನ ಚಪ್ಪರ ಜಖಂಗೊಂಡಿದೆ. ಪಟೇಲ್ ನಗರ, ಬಸವೇಶ್ವರ ಬಡಾವಣೆ, ಇಂದಿರಾನಗರ, ಚಪ್ಪರದಹಳ್ಳಿ, ಚಿತ್ತವಾಡ್ಗಿ, ಪಟೇಲ್ ನಗರ ಸೇರಿದಂತೆ ಹಲವೆಡೆ ಚರಂಡಿಗಳು ಉಕ್ಕಿ ಹರಿದು, ಹೊಲಸು ರಸ್ತೆ ಮೇಲೆ ಹರಿದಾಡಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ಹಾಗೂ ಕಮಲಾಪುರ, ಮರಿಯಮ್ಮನಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಜೋರಾಗಿತ್ತು. ಅದರಲ್ಲೇ ವಾಹನಗಳು ಸಂಚರಿಸಿದವು. ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.