

ಹೊಸಪೇಟೆ: ಕರೊನಾ ಸಮಯದಲ್ಲಿ ಕೆಲಸ ಮಾಡಿದ ಕೋವಿಡ್ ಸೇನಾನಿಗಳ ಉದ್ಯೋಗ ಮುಂದುವರಿಸುವಂತೆ ಒತ್ತಾಯಿಸಿ ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜನರ ಪ್ರಾಣ ರಕ್ಷಣೆಗಾಗಿ ಹೋರಾಡಿದವರನ್ನು ಏಕಾಏಕಿ ನಡು ನೀರಿನಲ್ಲಿ ಕೈ ಬಿಡುವುದು ತರವಲ್ಲ. ಕರೊನಾದಂಥ ಭೀಕರ ಸಮಯದಲ್ಲಿ ಹಲವರು ತಮ್ಮ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡಿದ್ದೇವೆ. ಆದರೆ, ಏಕಾಏಕಿ ಕೆಲಸದಿಂದ ತೆಗೆಯುತ್ತಿರುವುದರಿಂದ ಮುಂದಿನ ಜೀವನ ಹೇಗೆ ಸಾಗಿಸಬೇಕೆಂಬ ದಿಕ್ಕು ತೋಚದಾಗಿದೆ. ಸರ್ಕಾರ, ಈ ರೀತಿ ನಮ್ಮನ್ನು ಕೈ ಬಿಟ್ಟರೆ ನಮ್ಮ ಕುಟುಂಬದ ಪರಿಸ್ಥಿತಿ ಏನಾಗಲಿದೆ..? ಇದೇ ಕೆಲಸವನ್ನೇ ನಂಬಿಕೊಂಡು ಜೀವನ ನಡೆಸಿದ್ದೇವೆ. ಕೂಡಲೇ ನಮ್ಮನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮುಂದಿನ ನೇಮಕ ಆಗುವವರೆಗೂ ನಮ್ಮ ಸೇವೆ ಮುಂದುವರಿಸಿ, ಅಲ್ಲದೆ, ಇಲಾಖೆ ನೇರ ನೇಮಕದಲ್ಲಿ ನಮ್ಮ ಸೇವೆ ಪರಿಗಣಿಸಿ, ಮೊದಲ ಆದ್ಯತೆ ನೀಡಬೇಕು. ಜತೆಗೆ ವಯಸ್ಸಿನ ಸಡಿಲಿಕೆ ಹಾಗೂ ಕೋವಿಡ್ ವಿಶೇಷ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಡಿಸಿಗೆ ಮನವಿ ಸಲ್ಲಿಸಿದರು.