

ಹೊಸಪೇಟೆ: ಇಲ್ಲಿನ 28ನೇ ವಾರ್ಡ್ ಸದಸ್ಯ ಎಚ್.ಕೆ.ಮಂಜುನಾಥ ಅವರು ಕೌನ್ಸಿಲರ್ ಚುನಾವಣಾ ಸಂದರ್ಭ ತಮ್ಮ ವಿರುದ್ಧ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳು, ಬಿಪಿಎಲ್ ಕಾರ್ಡ್ ಬಗೆಗಿನ ಮಾಹಿತಿ ಮರೆಮಾಚಿದ್ದರಿಂದ ಸದಸ್ಯತ್ವಕ್ಕೆ ತೂಗುಗತ್ತಿ ಎದುರಾಗಿದೆ.
ಈ ಕುರಿತು ಭಾಸ್ಕರ್ ಗೌಡ ಎಂಬುವವರು 2022ರ ಫೆ.16 ರಂದು ಎಸಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ವಿಚಾರಣೆ-ತನಿಖೆ ನಡೆಸಿದ ಸಹಾಯಕ ಆಯುಕ್ತ ಮತ್ತು ತಹಸೀಲ್ದಾರರ ವರದಿ ಆಧರಿಸಿ ಕಳೆದ ಗುರುವಾರ (ಅ.12) ನಗರಾಭಿವೃದ್ಧಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಡಿಸಿ ವರದಿ ಸಲ್ಲಿಸಿದ್ದಾರೆ.
2021ರಲ್ಲಿ ಸ್ಪರ್ಧಿಸಿದ್ದ ಮಂಜುನಾಥ ಅವರು ತಮ್ಮನ್ನು ಶಿಕ್ಷೆಗೆ ಗುರಿಪಡಿಸುವಂತಹ ಯಾವುದೇ ಪ್ರಕರಣಗಳಿಲ್ಲವೆಂದು ಘೋಷಿಸಿಕೊಂಡಿದ್ದರು. ಆದರೆ, ಇವರ ವಿರುದ್ಧ ಹೊಸಪೇಟೆ ಬಡಾವಣೆ ಠಾಣೆ, ಬಳ್ಳಾರಿಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಬಗ್ಗೆ ಎಫ್‌ಐಆರ್ ಲಭ್ಯವಾಗಿವೆ. ತಾವು ಬಿಪಿಎಲ್ ಕಾರ್ಡ್‌ದಾರರೆಂದು ಘೋಷಿಸಿಕೊಂಡಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಆ ಪಡಿತರ ಚೀಟಿ 2021ರ ಜ.6 ರಂದು ರದ್ದುಗೊಂಡಿದೆ. ಈ ಹಿನ್ನೆಲೆಯಲ್ಲಿ ಮಂಜುನಾಥ ಸದಸ್ಯತ್ವ ರದ್ದು ಕುರಿತು ಕ್ರಮ ಜರುಗಿಸುವಂತೆ ವರದಿಯಲ್ಲಿ ಕೋರಿದ್ದಾರೆ.