ನಗರಸಭೆ ಸದಸ್ಯನ ಉಚ್ಚಾಟನೆ

24 MANJU 05
Published on

ಹೊಸಪೇಟೆ: ಇಲ್ಲಿನ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಕಾಂಗ್ರೆಸ್ ಪಕ್ಷದ 20ನೇ ವಾರ್ಡ್ ಸದಸ್ಯ ಕೆ.ಮಹೇಶ್ ಕುಮಾರ ಅವರನ್ನು ಪಕ್ಷದಿಂದ ಮಂಗಳವಾರ ಉಚ್ಚಾಟನೆ ಮಾಡಲಾಗಿದ್ದು, ಸದಸ್ಯತ್ವ ರದ್ದತಿ ಕೋರಿ ಪಕ್ಷದ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ಅವರು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರಿಗೂ ದೂರು ಸಲ್ಲಿಸಿದ್ದಾರೆ.

ಒಂದು ರಾಜಕೀಯ ಪಕ್ಷ ತನ್ನ ಸದಸ್ಯರಿಗೆ ವಿಪ್ ಜಾರಿಗೊಳಿಸಿದ ಬಳಿಕವು ಅದನ್ನು ಉಲ್ಲಂಘನೆ ಮಾಡುವುದು ಹಾಗೂ ಮತದಾನದಿಂದ ದೂರ ಉಳಿಯುವುದು ಕೂಡ ಪಕ್ಷ ವಿರೋಧಿ ಚಟುವಟಿಕೆಯಾಗಲಿದೆ. ಆದ್ದರಿಂದ ಪಕ್ಷದ ವಿಪ್ ಉಲ್ಲಂಘನೆ, ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದು ಹಾಗೂ ಚುನಾವಣೆ ಪ್ರಕ್ರಿಯೆಯಲ್ಲಿ ಕೂಡ ಗೈರು ಹಾಜರಾಗಿದ್ದು, ಇನ್ನೊಂದು ರಾಜಕೀಯ ಪಕ್ಷಕ್ಕೆ ಸೇರಿದರೆ ಅದು ಪಕ್ಷಾಂತರವಾಗುತ್ತದೆ. ಮತದಾನ ಮಾಡದೇ ವಿಪ್ ಉಲ್ಲಂಘನೆ ಮಾಡಿ ಮತದಾನದಿಂದ ದೂರ ಉಳಿಯುವುದು ಕೂಡ ಪಕ್ಷಾಂತರ ನಿಷೇದ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪಕ್ಷ ವಿರೋಧ ಮಾಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಅಧಿನಿಯಮ 1987 ಕಲಂ-3ರ ಪ್ರಕಾರ ಮತ್ತು 1995ರಲ್ಲಿ ಆಗಿರುವ ತಿದ್ದುಪಡಿಗಳ ಅನ್ವಯ ಸದಸ್ಯತ್ವ ರದ್ದುಪಡಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.

ನಗರದ 20ನೇ ವಾರ್ಡ್ನ ಕಾಂಗ್ರೆಸ್ ಪಕ್ಷದ ಹಲವಾರು ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ಕೆ.ಮಹೇಶ್ ಕುಮಾರ್ ವಿರುದ್ದ ಕ್ರಮಜರುಗಿಸುವಂತೆ ಲಿಖಿತವಾಗಿ ದೂರುಗಳನ್ನು ನೀಡಿದ್ದಾರೆ. ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಗೈರು ಹಾಜರಾಗಿದ್ದು ಹಾಗೂ ಪಕ್ಷ ವಿರೋಧಿ ಚಟುವಟಿಕೆ ಕಂಡುಬAದ ಹಿನ್ನೆಲೆಯಲ್ಲಿ ತಕ್ಷಣ ಜಾರಿಗೆ ಬರುವಂತೆ ಕೆ.ಮಹೇಶ್ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್ ಅವರು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net