

ಹೊಸಪೇಟೆ: ಕೆಆರ್‌ಎಸ್ ಪಕ್ಷದ ಸಮಾಜ ಪರವಾದ ಕಳಕಳಿ ಬಗ್ಗೆ ನನಗೆ ಅಪಾರ ಗೌರವ ಇದೆ. ನಾನು ಇನ್ನೊಂದು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದರೂ ಈ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಈ ಬದ್ಧತೆ ಕಾರಣಕ್ಕಾಗಿ ಎಂದು ಸಂಯುಕ್ತ ಜನತಾ ದಳ (ಜೆಡಿಯು) ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಗರದ ಜಿಲ್ಲಾ ಕ್ಷೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾರ್ಥ ಸಾಧನೆಗಾಗಿ ಮರಗಿಡಗಳನ್ನು ನಾಶ ಮಾಡಲಾಗುತ್ತಿದೆ. ಗುಡ್ಡಗಾಡು-ಹಳ್ಳಕೆರೆಗಳನ್ನು ನುಂಗಿ ಹಾಕುತ್ತಿದ್ದಾರೆ. ಜೆಸಿಬಿ ಪಕ್ಷಗಳು ಅಧಿಕಾರ ಬಂದಾಗಿನಿAದಲೂ ಪರಿಸರದ ಮೇಲೆ ದಾಳಿ ನಡೆಯುವುದು ಹೆಚ್ಚಾಗಿದ್ದು, ಕಡಿವಾಣ ಹಾಕಬೇಕಿದೆ. ಇದಕ್ಕಾಗಿ ಜನಾಂದೋಲ ರೂಪಗೊಳ್ಳಬೇಕಿದೆ. ಪರಿಸರ ಸಂರಕ್ಷಣೆಗೆ ಆಗ್ರಹಿಸಿ, ಹರಿಹರದಿಂದ ಕಿಷ್ಕಿಂದೆಯವರಿಗೆ ಡಿ.22 ರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಮುಖಂಡ ಪ.ಯ. ಗಣೇಶ ಮಾತನಾಡಿ, ಸಮಾಜದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ. ಇದರ ಕಡಿವಾಣಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭ್ರಷ್ಟಾಚಾರ ವಿರೋಧಿ ನೆಲೆಯಲ್ಲಿ ಕೆಲಸ ಮಾಡಬೇಕಿದೆ ಎಂದರು.
ವಿಜಯನಗರ ಜಿಲ್ಲಾಧ್ಯಕ್ಷ ಸುಬಾನ್ ಹುಗಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನವೀರ ಚಿತ್ತಾರ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಟಿ. ನಜೀರ್, ರೈತ ಘಟಕದ ಜಿಲ್ಲಾಧ್ಯಕ್ಷರು ಆನಂದ್ ಚಲವಾದಿ, ವಿಜಯನಗರ ಜಿಲ್ಲಾ ಕಾರ್ಯದರ್ಶಿ ಹರಕುಣಿ ಗಣೇಶ, ಕೊಪ್ಪಳ ಜಿಲ್ಲಾಧ್ಯಕ್ಷ ಆಶಾ ವೀರೇಶ, ಬಳ್ಳಾರಿ ಜಿಲ್ಲಾ ಎಸ್.ಸಿ.ಎಸ್.ಟಿ. ಘಟಕದ ಅಧ್ಯಕ್ಷ ಹೆಚ್.ವಿ. ಸಂತೋಷ ಭಾಗವಹಿಸಿದ್ದರು.