

ಹೊಸಪೇಟೆ: ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂಘದಿAದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಂವಿಧಾನ ದಿನಾಚರಣೆ ನಿಮಿತ್ತ ಬೌದ್ಧರ ಧಾರ್ಮಿಕ ಹಕ್ಕಿಗಾಗಿ ಪ್ರತಿಭಟನೆ ನಡೆಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದ ಮನೆ ಮಾತನಾಡಿ, ಬುದ್ಧಗಯಾ ಜಗತ್ತಿನ ಬೌದ್ಧರಿಗೆಲ್ಲ ಪರಮ ಪವಿತ್ರವಾದ ಸ್ಥಳ. ರಾಜಕುಮಾರ ಸಿದ್ಧಾರ್ಥ ಬೋಧಿ ಜ್ಞಾನ ಪಡೆದು ಭಗವಾನ್ ಬುದ್ಧನಾದ ಪಾವನ ಸ್ಥಳ. ಈ ಕ್ಷೇತ್ರ ಬುದ್ಧನ ಕಾಲದಿಂದಲೂ ಪೂಜ್ಯನಿಯವಾಗಿದೆ. ಸಾಮ್ರಾಟ್ ಅಶೋಕನು ಸೇರಿ ಈ ದೇಶದ ಅನೇಕ ರಾಜ ಮಹಾರಾಜರು ಮತ್ತು ಭರ್ಮಾ, ಶ್ರೀಲಂಕಾ, ಥೈಲ್ಯಾಂಡ್, ಜಪಾನ್ ಮತ್ತು ಇನ್ನಿತರ ದೇಶಗಳ ರಾಜರು ಹಾಗೂ ಬೌದ್ಧ ಉಪಾಸಕರು ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರದ್ಧಾ ಪೂರ್ವಕ ಕೊಡುಗೆ ನೀಡಿರುವುದು ಇತಿಹಾಸವಿದೆ.
ಬೋದಗಯಾ ಟೆಂಪಲ್ ಆಕ್ಟ್ 1949ರ ಪ್ರಕಾರ ಬೌದ್ಧರಿಗೆ ತಮ್ಮ ದೇವಾಲಯದ ನಿರ್ವಾಹಣೆ ಮಾಡಲು ಅಧಿಕಾರವಿಲ್ಲ. ಬುದ್ಧವಿಹಾರ ಹಿಂದೂಗಳ ನಿಯಂತ್ರಣದಲ್ಲಿದೆ. ಇದು ಬೌದ್ಧ ಧರ್ಮಿಯರ ಮತ್ತು ಅಂಬೇಡ್ಕರ್ ಅನುಯಾಯಿಗಳ ಹಾಗೂ ಭಾರತದ ಸಂವಿಧಾನವಾದಿ ಪ್ರಗತಿಪರ ಚಿಂತಕರ ಸ್ವಾಭಿಮಾನದ ಪ್ರಶ್ನೆಯಾಗಿದೆ. ದೇಶದ ಬೌದ್ಧ ಸಮುದಾಯ ಮತ್ತು ಅಂಬೇಡ್ಕರ್ ಅನುಯಾಯಿಗಳು ಸಂವಿಧಾನದತ್ತ ಧಾರ್ಮಿಕ ಅವಕಾಶಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಬೌದ್ಧರಿಗೆ ತಮ್ಮ ಧಾರ್ಮಿಕ ಕ್ಷೇತ್ರ ಸ್ವತಂತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ ಸಂವಿಧಾನದ ಕಲಂ-3, 25, 26 ಮತ್ತು 29ನ್ನೂ ಜಾರಿಗೊಳಿಸಲು ಅಡ್ಡಿಯಾಗಿರುವ ಬಿ.ಟಿ.ಆಕ್ಟ್ 1949ನ್ನು ರದ್ದು ಪಡಿಸಿ ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌಧ್ಧರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಜೈಭೀಮ್ ವಿದ್ಯಾರ್ಥಿ ಯುವ ಜನ ಒಕ್ಕೂಟ ಜಿಲ್ಲಾಧ್ಯಕ್ಷ ಜೆ.ಶಿವಕುಮಾರ್, ಪ್ರಮುಖರಾದ ಪೀರ್‌ಬಾಷ, ಸಣ್ಣ ಮಾರೆಪ್ಪ, ನಿಂಬಗಲ್ ರಾಮಕೃಷ್ಣ, ಜಯಪ್ಪ ಪಟ್ಟಿ, ಚಂದ್ರಶೇಖರ್, ಈರಣ್ಣ, ಕಾರಿಗನೂರು ರಾಮಕೃಷ್ಣ, ರಾಮಚಂದ್ರ, ವೀರಭದ್ರನಾಯಕ, ವಿಶಾಲ್‌ಮ್ಯಾಸರ್, ಅಂಜಲಿಬೆಳಗಲ್ ಇತರರಿದ್ದರು.