

ಹೊಸಪೇಟೆ: ಕಾಂಗ್ರೇಸ್ ಪಕ್ಷದ ಪ್ರಚಾರ ಸಮಿತಿಗಳನ್ನು ಕೇವಲ ಚುನಾವಣೆಗೆ ಸೀಮಿತಗೊಳಿಸದೆ, ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯಾದ್ಯಂತ ಜಿಲ್ಲಾ, ವಿಭಾಗ ಮಟ್ಟದಲ್ಲಿ ಪ್ರಚಾರ ಸಮಿತಿ ಸಭೆಗಳನ್ನು ನಡೆಸುವ ಮೂಲಕ ಪಕ್ಷವನ್ನು ಸಂಘಟಿಸಲು ಎಐಸಿಸಿ ಅನುಮೋದನೆ ನೀಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ ಸೊರಕೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆ ದೃಷ್ಟಿಯಿಂದ ಈಗಾಗಲೇ ರಾಜ್ಯದ 22 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ವಿಜಯನಗರ 23ನೇ ಜಿಲ್ಲೆಯಾಗಿದೆ. ರಾಜ್ಯ ಮಟ್ಟದಿಂದ ಪಂಚಾಯಿತಿ ಮಟ್ಟದವರೆಗೆ ವಿವಿಧ ಸಮಿತಿಗಳನ್ನು ರಚಿಸುವ ಮೂಲಕ ಅದಕ್ಕೆ ಸದಸ್ಯರನ್ನು ನೇಮಕ ಮಾಡಲಾಗುದು. ಈ ಕುರಿತಂತೆ ಈಗಾಗಲೇ ರಾಜ್ಯ ಮಟ್ಟದ ಕಾರ್ಯಾಗಾರ ನಡೆಸಿ ಪದಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ವಿಭಾಗೀಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಕಾರ್ಯಕರ್ತರಿಗೆ ಈ ಕುರಿತು ತರಬೇತಿ ನೀಡುವ ಉದ್ದೇಶವಿದೆ ಎಂದರು.
ಚುನಾವಣೆ ಪೂರ್ವದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಸಿಎಂ ಸಿದ್ದರಾಮಯ್ಯ ನವರು ಸಹಿ ಮಾಡಿದ ಪ್ರಣಾಳಿಕೆಯನ್ನು ಮನೆ-ಮನೆಗೆ ಹಂಚಲಾಗಿತ್ತು. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿಯೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇದರಿಂದ ಮಹಿಳೆಯ ತಲಾ ಆದಾಯ ಅಧಿಕವಾಗಿದೆ. ತಲಾ ಆದಾಯದಲ್ಲಿ ದೇಶದಲ್ಲಿಯೇ ಕರ್ನಾಟಕ ನಂ.1 ಸ್ಥಾನದಲ್ಲಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ 3ನೇ ಸ್ಥಾನದಲ್ಲಿದೆ. ವಿರೋಧ ಪಕ್ಷಗಳ ಆರೋಪದಂತೆ ಸರ್ಕಾರ ದಿವಾಳಿಯಾಗಿದ್ದರೆ ಇದೆಲ್ಲಾ ಮಾಡಲು ಆಗುತ್ತಿತ್ತ ಎಂದು ಪ್ರಶ್ನಿಸಿದರು.
ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಮಂಜುನಾಥ, ಪ್ರಧಾನ ಕಾರ್ಯದರ್ಶೀ ಯಶೋಧರ ಮೂರ್ತಿ, ಜಿಲ್ಲಾಧ್ಯಕ್ಷ ಎಚ್.ಎವ್.ಮಹಮದ್ ಇಮಾಮ್ ನಿಯಾಜಿ, ಪ್ರಮುಖರಾದ ಗುಜ್ಜಲ ನಾಗರಾಜ, ಡಾ.ಸಂತೋಷ್, ಆನಂದ್. ಪಿ.ಬಾಬು ಇತರರಿದ್ದರು.