

ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೊಹ್ಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿಚೌಕ್ ನಲ್ಲಿ ಸೇರಿದ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತ, ಕೇಂದ್ರ ಬಸ್ ನಿಲ್ದಾಣ, ಪುನೀತ್ ರಾಜ್‍ಕುಮಾರ್ ವೃತ್ತದ ವರೆಗೆ ರಸ್ತೆ ತಡೆದು ಪ್ರತಿಭಟನ ರ್ಯಾಲಿ ನಡೆಸಿ ಆಗ್ರಹಿಸಿದರು. ಕೇಂದ್ರ ಸರ್ಕಾರ, ರಾಜ್ಯಪಾಲರ ವಿರುದ್ಧ ಘೋಷಣೆ ಮೊಳಗಿಸಿದರು.
ಬಳಿಕ ಮಾತನಾಡಿದ ಬಳ್ಳಾರಿ ಸಂಸದ ಈ.ತುಕಾರಾಮ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕಾಂಗ್ರೆಸ್ ಸರ್ಕಾರದ ಏಳಿಗೆ ಸಹಿಸುತ್ತಿಲ್ಲ. ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳಲ್ಲಿ ಅಧಿಕಾರ ಕಸಿಯಲು ಯತ್ನಿಸುತ್ತಿದೆ. ರಾಜ್ಯಪಾಲರನ್ನು ಕೈಗೊಂಬೆ ಮಾಡಿಕೊಂಡು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲೂ ಇದೇ ರಾಜ್ಯಪಾಲರಿದ್ದರು. ಆಗ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಕುಮಾರಸ್ವಾಮಿ ಅವರ ವಿರುದ್ಧ ಆರೋಪಗಳ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಲಾಗಿತ್ತು. ಆಗ ಅನುಮತಿ ನಿರಾಕರಿಸಿದ್ದ ರಾಜ್ಯಪಾಲರು ಈಗ ಕೇಂದ್ರದ ದಾಳವಾಗಿ ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಅನುಮತಿ ನೀಡಿದ್ದಾರೆ. ಇದು ಖಂಡನೀಯ. ಇದನ್ನು ನಾವು ಖಂಡಿಸುತ್ತೇವೆ. ನ್ಯಾಯಾಂಗ ಹೋರಾಟದಲ್ಲಿ ಗೆಲ್ಲುತ್ತೇವೆ, ಮತ್ತೆ ಸಿದ್ದರಾಮಯ್ಯ ಅವರೆ ಸಿಎಂ ಆಗಿ ಮುಂದು ವರೆಯಲಿದ್ದಾರೆ ಎಂದು ಗುಡುಗಿದರು.
ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ, ಶಾಸಕಿ ಲತಾ ಮಲ್ಲಿಕಾರ್ಜುನ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಸಂಯುಕ್ತ ರಾಣಿ ಇತರರಿದ್ದರು.