ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಕ್ರಮ?

CONGRESS
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ರಾಜ್ಯದಲ್ಲಿ ನಡೆದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಪಕ್ಷದ ಡಿಜಿಟಲ್ ಐವೈಸಿ ಆ್ಯ ಪ್ ಅನ್ನು ಹೈಜಾಕ್ ಮಾಡಿ ಪ್ರಭಾವಿಗಳ ಮಕ್ಕಳು ಗೆಲುವು ಸಾಧಿಸಿದ್ದಾರೆ ಎಂಬ ಅನುಮಾನ ಸ್ವಪಕ್ಷೀಯ ಪ್ರಮುಖರೇ ವ್ಯಕ್ತಪಡಿಸುತ್ತಿದ್ದಾರೆ.

ఎంటి- ఎంఎలోఎ ಚುನಾವಣೆಗಳಲ್ಲಿ ఇవిఎం ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಮುಖಂಡರೇ ಈಗ ಅವರದ್ದೇ ಪಕ್ಷದ ಚುನಾವಣೆಯ ಆನ್‌ಲೈನ್ ಆ್ಯಪ್ ಮೇಲೂ ಸಂಶಯ ವ್ಯಕ್ತಪಡಿಸಿದ್ದಾರೆ. ಯುವ ಕಾಂಗ್ರೆಸ್‌ ರಾಜ್ಯ-ಜಿಲ್ಲಾ ಘಟಕ ಚುನಾವಣೆಗೂ ಮುನ್ನ ಹಲವು ತಿಂಗಳಿಂದ ಯುವ ಸದಸ್ಯರನ್ನು ಸೇರಿಸಲಾಗಿದೆ. ಮತದಾನದ ವೇಳೆ ಬೆಂಬಲಿಗರು ಶ್ರಮಿಸಿದ್ದು, ಮತ ಹಾಕಿಸಿದ್ದಾರೆ. ಆದರೂ, ಚುನಾವಣೆಯಲ್ಲಿ ನಮಗೆ ಸೋಲುಂಟಾಗಿದ್ದು, ಅಕ್ರಮ ನಡೆದಿರುವ ಅನುಮಾನವಿದೆ ಎಂದು ವಿಜಯನಗರ ಜಿಲ್ಲಾ ಘಟಕದ ನೂತನ ಉಪಾಧ್ಯಕ್ಷ ಶೇಖ್ ತಾಜುದ್ದೀನ್ ಅವರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. ಇನ್ನು ಹಾಸನದಲ್ಲಿ ಯುವ ಕಾಂಗ್ರೆಸ್ ಮುಖಂಡ ಪ್ರವೀಣ್ ಗೌಡ ಅವರು ತಡೆಯಾಜ್ಞೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರೆ, ಮರು ಚುನಾವಣೆ ನಡೆಯಲಿ, ಇಲ್ಲವೆಂದರೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ ತಿಮ್ಮಲಾಪುರ ಅವರು ಬಾಗಲಕೋಟೆಯಲ್ಲಿ ಆಗ್ರಹಿಸಿದ್ದಾರೆ. ಇದರಂತೆ ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಹಲವು ಜಿಲ್ಲೆಗಳಲ್ಲಿ ಅಕ್ರಮವಾಗಿ ಚುನಾವಣೆ ಫಲಿತಾಂಶ ಬಂದಿರುವ ಆರೋಪಗಳು ಕೇಳಿಬರುತ್ತಿದೆ.

ಆನ್‌ಲೈನ್ ಮೂಲಕ ಚುನಾವಣೆ ನಡೆಸಲಾಗಿದ್ದು, ಫಲಿತಾಂಶವನ್ನು ಒಂದೆರಡು ದಿನದಲ್ಲೇ ಬಿಡುಗಡೆ ಮಾಡಬಹುದಾಗಿತ್ತು. ಆದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದಿದ್ದ ಚುನಾವಣೆ ಫಲಿತಾಂಶವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದೂ ಹಲವು ಅನುಮಾನಗಳಿಗೆ ಎಡೆಮಾಡಿದೆ. ಪ್ರಭಾವಿಗಳು ದೆಹಲಿಯಲ್ಲಿ ಕೂತು ಆಟವಾಡಿದ್ದಾರೆ. ತಮಗೆ ಬೇಕಿದ್ದ ಮತಗಳನ್ನು ಹಾಕಿಕೊಂಡು, ಉಳಿದವನ್ನು ತಿರಸ್ಕರಿಸಿದ್ದಾರೆ. ಇದು ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಈ ಬಗ್ಗೆ ರಾಜ್ಯ-ರಾಷ್ಟ್ರ ಮುಖಂಡರು ಗಂಭೀರ ಪರಿಗಣಿಸಬೇಕು. ಪಾರದರ್ಶಕ ಚುನಾವಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಯುವ ಕಾಂಗ್ರೆಸ್‌ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಚುನಾವಣೆ ನಿಗದಿ ಪಡಿಸಲಾಗಿತ್ತು. ಐವೈಸಿ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದ ಪರಿಣಾಮ ಅನೇಕರು ಮತದಾನದಿಂದ ವಂಚಿತರಾದರು. ತಾಂತ್ರಿಕ ಸಮಸ್ಯೆ ಉಂಟಾಗಿ ಅನೇಕ ಕಡೆ ಮತದಾನವಾಗಿಲ್ಲ. ಇದರಿಂದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಐವೈಸಿ ಚುನಾವಣೆ ಆಯೋಗವು ಫಲಿತಾಂಶ ಪ್ರಕಟ ಮಾಡುವಲ್ಲಿ ವಿಳಂಬ ಮಾಡಿದ್ದು, ಕೆಲವು ಬ್ಲಾಕ್ ಫಲಿತಾಂಶ ಮರು ಪರಿಶೀಲನೆ ಮಾಡಿ ಪ್ರಕಟಿಸಿದೆ. ಆ್ಯಪ್‌ನಲ್ಲಿ ಮತದಾನವನ್ನು ತಿರಸ್ಕಾರ ಮಾಡಲಾಗಿದ್ದು, ಫಲಿತಾಂಶದಲ್ಲಿ ಗೊಂದಲ ಉಂಟಾಗಿದೆ. ಈ ಚುನಾವಣೆ ಅಕ್ರಮವಾಗಿದ್ದು, ತನಿಖೆ ಆಗಬೇಕಿದೆ. ಆರೋಪಿಗಳ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕ್ರಮಕೈಗೊಳ್ಳಲಿ ಎಂಬುದು ಕಾರ್ಯಕರ್ತರ ಆಗ್ರಹವಾಗಿದೆ. ಚುನಾವಣೆಯಲ್ಲಿ ಒಟಿಪಿ ಮುಖಾಂತರ ಮಾಡಿದ ಮತದಾನ ಪ್ರಕ್ರಿಯೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಬೇರೆ ಪಕ್ಷಗಳ ಸದಸ್ಯರನ್ನೂ ಬಳಕೆ ಮಾಡಿಕೊಂಡು ಕೆಲವರು ಅನೈತಿಕ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಈ ಫಲಿತಾಂಶ ಒಪ್ಪಲ್ಲ. ಚುನಾವಣೆ ಫಲಿತಾಂಶ, ಪ್ರಕ್ರಿಯೆ ಸಂಪೂರ್ಣ ರದ್ದು ಪಡಿಸಬೇಕು. ಬ್ಯಾಲೆಟ್ ಪೇಪರ್ ಮೂಲಕ ಮರುಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಕಾರ್ಯಕರ್ತರು ರಾಜೀನಾಮೆ ನೀಡಲಿದ್ದೇವೆ ಎಂದು ಸ್ವಪಕ್ಷದ ಮುಖಂಡರು ಎಚ್ಚರಿಕೆ ನೀಡುತ್ತಿದ್ದಾರೆ.

ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಸಿಗಲಿ ಎಂಬುದು ಕಾಂಗ್ರೆಸ್ ಧೈಯ. ಯುವ ಕಾಂಗ್ರೆಸ್‌ ಘಟಕದಲ್ಲಿ ಪಕ್ಷದ ಪ್ರಮುಖರು ಕೈ ಹಾಕುವಂತಿಲ್ಲ. ಆದರೆ, ಇಲ್ಲಿ ಪ್ರಭಾವಿಗಳ ಕೈಚಳಕದಿಂದ ಯುವ ಕಾಂಗ್ರೆಸ್‌ನಲ್ಲಿ ಅಕ್ರಮದ ಮಾತು ಕೇಳಿ ಬಂದಿದೆ. ಸರಿಯಾಗಿ ತನಿಖೆಯಾಗಲಿ. | ಸಿರಾಜ್ ಶೇಖ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಜಯನಗರ ಶ್ರೀಮಂತರ ಮಕ್ಕಳು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡುವ ತಾಕತ್ತು ಹೊಂದಿರುತ್ತಾರೆ. ಕೋಟಿ ಕೋಟಿ ರೂ. ವ್ಯಯಿಸಿ ಚುನಾವಣೆ ನಡೆಸಿದ್ದಾರೆ. ಆ್ಯಪ್ ಹೈಜಾಕ್ ಮಾಡಿರುವ ಅನುಮಾನವಿದೆ. ಇದು ಇಲ್ಲಿ ಮಾತ್ರವಲ್ಲ, ರಾಜ್ಯ ವಿವಿಧೆಡೆ ಈ ಸಮಸ್ಯೆ ಕೇಳಿ ಬಂದಿದೆ. | ನಿಂಬಗಲ್ ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net