

ಹೊಸಪೇಟೆ: ರಾಜ್ಯಕ್ಕೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಅನ್ಯಾಯ ಖಂಡಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು.
ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಏಳು ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬರೀ ಖಾಲಿ ಚೊಂಬು ನೀಡಿದೆ. ಜಿಎಸ್‌ಟಿಯಲ್ಲಿ ಇಡೀ ದೇಶಕ್ಕೆ ಎರಡನೇ ಸ್ಥಾನದಲ್ಲಿರುವ ರಾಜ್ಯಕ್ಕೆ ನಯಾ ಪೈಸೆ ನೀಡಿಲ್ಲ. ಈ ಬಜೆಟ್ ಮೋದಿ ಕುರ್ಚಿ ಉಳಿಸಿಕೊಳ್ಳಲು ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಮಾತ್ರ ಅನುದಾನ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿ ರೈತರಿಗೆ ಬರಗಾಲಕ್ಕಾಗಿ ಹಣ ಮಂಜೂರು ಮಾಡಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಬೇಕಾಯಿತು. ರಾಜ್ಯದ ಬಗ್ಗೆ ಪ್ರಧಾನಿ ಮೋದಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವ ನಿರ್ಮಲಾ ಸೀತಾರಾಮ್ ಅವರು ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇವರು ಕೂಡ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಡಾ ಅಧ್ಕಕ್ಷ ಎಚ್‌ಎನ್‌ಎಫ್ ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಕೇಂದ್ರ ಸರ್ಕಾರ ಅನುದಾನ ಕೊಡುವುದರಲ್ಲಿ ತಾರತಮ್ಯ ಮಾಡಬಾರದು. ಬಜೆಟ್‌ನಲ್ಲಿ ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಹಂಚಿಕೆ ಮಾಡಬಾರದು. ಆದರೆ, ಮೋದಿ ನೇತೃತ್ವದ ಸರ್ಕಾರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳಿ, ಈಗ ನೋಡಿದರೆ ರಾಜ್ಯಕ್ಕೆ ಅನುದಾನ ನೀಡದೇ ವಂಚಿಸಿದೆ. ರಾಜ್ಯದ ಸಂಸದರು ಈ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಬೇಕು. ಮೋದಿ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್, ಪ್ರಮುಖರಾದ ಕೆ.ಎಸ್.ದಾದಾಪೀರ್, ಅನಂತ ಪದ್ಮನಾಭ ರಮೇಶ, ಡಿ.ವೆಂಕಟರಮಣ, ಸಣ್ಣ ಈರಪ್ಪ, ಸಣ್ಣಮಾರೆಪ್ಪ, ಏಕಾಂಬರೇಶ ನಾಯ್ಕ, ಗುರುಸಿದ್ದನ ಗೌಡ, ವಿ.ಅಂಜಿನಪ್ಪ, ಕುಮಾರೆಪ್ಪ, ರಾಧಾ ನಾಯ್ಡು, ಮಂಜುಳಾ, ಲಕ್ಷ್ಮಮ್ಮ ಇತರರಿದ್ದರು.