

ಹೊಸಪೇಟೆ: ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಐದು ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ರಾಜ್ಯ ಮಾನವಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ತ್ವರಿತ ನ್ಯಾಯ ಒದಗಿಸಲು ಜಿಲ್ಲಾವಾರು ವಿಚಾರಣಾ ಸಭೆಗಳನ್ನು ನಡೆಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ವಿಜಯನಗರ ಜಿಲ್ಲೆಯ ಒಂಬತ್ತು ಪ್ರಕರಣಗಳನ್ನು ಈ ದಿನ ವಿಚಾರಣೆ ನಡೆಸಲಾಗಿದೆ. ಈಗಾಗಲೇ 12 ಜಿಲ್ಲೆಗಳಿಗೆ ತೆರಳಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ಆಯೋಗವೇ ಸುಮೊಟೊ ಪ್ರಕರಣಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಪ್ರತಿದಿನ 30 ರಿಂದ 40 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಕೆಲ ಕಡೆ ಅನಿಷ್ಟ ಪದ್ಧತಿ ನಿರ್ಮೂಲನೆಗೆ ಕ್ರಮವಹಿಸಲಾಗಿದ್ದು, ಇದಕ್ಕಾಗಿ ಜಾಗೃತಿ ಕೂಡ ಮೂಡಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದು, ನೋಂದವರಿಗೆ ನ್ಯಾಯ ಒದಗಿಸಲಾಗಿದೆ. ಬೆಳಗಾವಿ, ಬಾಗಲಕೋಟಗಳಲ್ಲಿ ಭ್ರೂಣಹತ್ಯೆ ಪ್ರಕರಣಗಳು ಕಂಡು ಬಂದ ಬಳಿಕ ಸುಮೊಟೊ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಬಡವರಿಗೆ ನಿವೇಶನಗಳ ಹಕ್ಕುಪತ್ರ ಒದಗಿಸಲು ಕ್ರಮವಹಿಸಲಾಗಿದೆ ಎಂದರು.
ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮಾಯವಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲು ಈಗಾಗಲೇ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಸ್ ಪಾಸ್ ವಿತರಣಾ ಕೌಂಟರ್, ಸಹಾಯಕ ಸಂಚಾರ ನಿಯಂತ್ರಣಾಧಿಕಾರಿ ಕೊಠಡಿಗಳಿಗೂ ಭೇಟಿ ನೀಡಿ ಪರಿಶೀಲಿಸಲಾಗಿದೆ. ಎಲ್ಲೆಡೆ ಮೂಲಭೂತ ಸೌಕರ್ಯದ ಕೊರತೆ ಇದೆ. ಹಾಗಾಗಿ ಈ ಲೋಪದೋಷಗಳನ್ನುಸರಿಪಡಿಸಲು ಕೂಡ ಸೂಚಿಸಲಾಗಿದೆ ಎಂದರು.
ನಗರದ ಹಾಸ್ಟೆಲ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿಗೂ ಭೇಟಿ ನೀಡಲಾಗಿದ್ದು, ಸ್ವಚ್ಛತೆ ಹಾಗೂ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಒಂಬತ್ತು ಪ್ರಕರಣಗಳ ಪೈಕಿ ಎರಡು ಪ್ರಕರಣಗಳು ಪೊಲೀಸ್ ಇಲಾಖೆ, ಮೂರು ಸಿಡಿಪಿಒ ಇಲಾಖೆಗೆ ಸಂಬAಧಿಸಿದ್ದವು. ಉಳಿದ ಪ್ರಕರಣಗಳು ಜಿಲ್ಲಾ ಕಂದಾಯ ಇಲಾಖೆಗೆ ಸಂಬAಧಿಸಿದೆ. ಈ ಪ್ರಕರಣಗಳ ಕುರಿತು ಅಧಿಕಾರಿಗಳಿಂದ ವಿವರಣೆ ಕೇಳಲಾಗಿದೆ ಎಂದರು.
ಅಹವಾಲು ಸ್ವೀಕಾರ ಸಭೆ:
ಇದಕ್ಕೂ ಮುನ್ನ ನಡೆದ ಅಹವಾಲು ಸ್ವೀಕಾರ ಹಾಗೂ ವಿಚಾರಣಾ ಸಭೆ ರಾಜ್ಯ ಮಾನವಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ನಡೆಯಿತು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ, ಎಎಸ್ಪಿ ಸಲೀಂ ಪಾಷಾ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ, ಡಿಎಫ್‌ಒ ಅರ್ಸನಲ್ ಇತರರಿದ್ದರು.