

ಹೊಸಪೇಟೆ: ನಗರದ ಶಂಕರ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಗುರುವಾರ ಜಾನಪದ ಉತ್ಸವ ಅದ್ದೂರಿಯಾಗಿ ಆಚರಿಸಲಾಯಿತು.
ವಿದ್ಯಾರ್ಥಿಗಳು, ಭೋಧಕ ಹಾಗೂ ಭೋಧಕೇತರ ಸಿಬ್ಬಂಧಿಗಳು ಜಾನಪದ ಸೊಗಡಿನ ವೇಷ ಭೂಷಣಗಳನ್ನು ಧರಿಸಿ ಗಮನ ಸೆಳೆದರು. ವಿದ್ಯಾರ್ಥಿಗಳು ಕುಂಭಗಳನ್ನು ಹೊತ್ತುಕೊಂಡು ಡೊಳ್ಳು ಮತ್ತು ವಿವಿಧ ಕಲವಾದ್ಯಗಳೊಂದಿಗೆ ಕಾಲೇಜಿನಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಮತ್ತು ಪುನಃ ಕಾಲೇಜಿಗೆ ಮೆರವಣಿಗೆ ಮೂಲಕ ಸಾಗಿ ಬಂದರು. ನಂತರ ಕಾಲೇಜಿನ ಆವರಣದಲ್ಲಿ ಹಗ್ಗ ಜಗ್ಗಾಟ, ಜಾನಪದ ಆಹಾರಮೇಳ, ಜಾನಪದ ವಸ್ತುಗಳ ಪ್ರದರ್ಶನ, ಕೋಲಾಟ, ರಂಗೋಲಿ ಸ್ಪರ್ಧೆ, ಡೊಳ್ಳು ಕುಣಿತ ಮತ್ತು ಅನೇಕ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಜಾನಪದ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್.ಕೆ.ಕಾರಮಂಚಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲ ಡಾ.ನಾರಾಯಣ ಜಿ.ಹೆಬಸೂರ್, ಅಧ್ಯಾಪಕರುಗಳಾದ ಡಾ.ಕನಕಟ್ಟಿ ಜಯಣ್ಣ, ಡಾ.ಎ.ಗುರುರಾಜ, ಡಾ.ವೀರಭದ್ರಪ್ಪ, ಡಾ.ನಾಗಣ್ಣ ಕಿಲಾರಿ, ಡಾ.ಬೂದನೂರು ಸುರೇಶ್, ಡಾ.ಕೆ.ಶಿವಪ್ಪ, ಡಾ.ರಾಜೇಂದ್ರ ಪ್ರಸಾದ್, ಡಾ.ವಾಣಿಶ್ರೀ, ಡಾ.ಗುಜ್ಜಲ ಹುಲಗಪ್ಪ, ಡಾ.ಅಯ್ಯಾಳಿ ಯರಿಸ್ವಾಮಿ ಇತರರಿದ್ದರು.