ಶೀತಗಾಳಿಗೆ ಬೀಡುಬಿಟ್ಟ ವೈರಲ್ ಜ್ವರ

Published on

ಹೊಸಪೇಟೆ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪ್ರಭಾವದಿಂದಾಗಿ, ವಿಜಯನಗರ ಜಿಲ್ಲೆಯಲ್ಲಿ ಜಡಿಮಳೆಗೆ ಜಿಲ್ಲೆಯ ಜನತೆ ಸುಸ್ತಾಗಿ ಹೋಗಿದ್ದಾರೆ. ಶಾಲಾ-ಕಾಲೇಜು ಮತ್ತು ಕಚೇರಿಗಳಿಗೆ ತೆರಳುವ ಮಂದಿಗೂ ಮಳೆರಾಯ ಶಾಕ್ ಕೊಟ್ಟಿದ್ದಾನೆ. ಜೋರು ಚಳಿಗೆ, ಮಳೆಗೆ ವಾಹನ ಸವಾರರು ಸುಸ್ತಾಗಿ ಹೋಗಿದ್ದಾರೆ.

ಜಿಲ್ಲೆಯಲ್ಲಿ ಕೆಲದಿನಗಳಿಂದ ದಿನವಿಡಿ ಜಿಟಿ-ಜಿಟಿ ಮಳೆ ಸುರಿಯುತ್ತಿದೆ. ಕೆಲ ಕಾಲ ರಭಸಿಂದ ಸುರಿದರೆ ಇನ್ನೂ ಕೆಲ ಕಾಲ ಜಿಟಿಜಿಟಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಹಲವೆಡೆ ನಿರಂತರವಾಗಿ ಮೋಡ ಮುಸುಕಿದ ವಾತಾವರಣ ಮತ್ತು ತಣ್ಣನೆಯ ಜೋರು ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಜನರು ಚಳಿಗೆ ನಡುಗುವಂತಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಹವಾಮಾನ ವೈಪರೀತ್ಯದ ಪ್ರಭಾವವು ಜಿಲ್ಲೆಯ ಮೇಲೂ ಬಿದ್ದಿದ್ದು ಬೆಚ್ಚಗೆ ಇರಲು ಹೆಚ್ಚಿನ ಜನರು ಟೋಪಿ, ಸ್ವೆಟರ್, ಜರ್ಕಿನ್‌ಗಳ ಮೊರೆ ಹೋಗಿದ್ದಾರೆ.

ಈಗಾಗಲೇ ಭಾರತೀಯ ಹವಾಮಾನ ಇಲಾಖೆ ರಾಜ್ಯದಲ್ಲಿ ಮುಂದಿನ ಒಂದು ವಾರದ ಕಾಲ ಭಾರಿ ಶೀತಗಾಳಿ ಇರುವ ವಿಚಾರದಲ್ಲಿ ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ. ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ 22 ಡಿಗ್ರಿಗೆ ಬರುವ ಸಾಧ್ಯಯಿದೆ ಎಂದು ಮಾಹಿತಿ ನೀಡಿದೆ. ಚಳಿಯ ಜತೆಗೆ ದಟ್ಟ ಮಂಜು ಕವಿಯುವ ಸಾಧ್ಯತೆಯಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಇದರ ಪ್ರಭಾವ ಕೊಂಚ ಜಾಸ್ತಿಯಾಗುವ ಸಾಧ್ಯತೆಯನ್ನು ಇಲಾಖೆ ಒತ್ತಿ ಹೇಳಿದೆ. ಈ ರೀತಿಯ ಹವಾಮಾನ ಬದಲಾವಣೆಯಿಂದಾಗಿ ಜನರ ಆರೋಗ್ಯದಲ್ಲಿಸಾಕಷ್ಟು ಏರುಪೇರುಗಳು ದಾಖಲಾಗುವ ಸಾಧ್ಯತೆಯನ್ನು ಆರೋಗ್ಯ ಇಲಾಖೆ ಸೂಚನೆ ನೀಡಿದೆ

ವಿವಿಧೆಡೆ ಮಳೆಸುರಿಯುತ್ತಿದ್ದರೆ, ಬಹುತೇಕ ಕಡೆ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಶೀತಗಾಳಿ ಬೀಸುತ್ತಿದೆ. ಮತ್ತೊಂದೆಡೆ ಬದಲಾದ ವಾತಾವರಣದಿಂದ ಜನರು ಹೊರಗೆ ಬರಲು ಹೆದುರುವಂತಾಗಿದೆ. ಚಳಿಗೆ ನೆಗಡಿ, ತಲೆ ನೋವು, ಕೈ ಕಾಲು ನೋವು, ಕೆಮ್ಮು, ಕಣ್ಣು ಉರಿ ಸೇರಿ ಶೀತದ ನಾನಾ ಸಮಸ್ಯೆಗಳು ಕಾಡುತ್ತಿವೆ. ಚಳಿ- ಮಳೆಯ ವಾತಾವರಣದಿಂದ ಬೆಳಗ್ಗೆ ಜನತೆ ವಾಕಿಂಗ್ ಬರಲು ಹಿಂದೇಟು ಹಾಕುತ್ತಿದ್ದರೆ. ಕೆಲವರು ಈ ವಾತಾವರಣದಲ್ಲೇ ಹೊರ ಬಂದು ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಕೆಲವರು ಚಳಿಯ ಹಿನ್ನೆಲೆ ಹಾಸಿಗೆಯಿಂದ ಎದ್ದು ಹೊರ ಬರಲು ಹಿಂದೇಟು ಹಾಕಿ ಮನೆಯಲ್ಲಿಯೇ ಬೆಚ್ಚಗೆ ಇದ್ದಾರೆ. ಬಿಸಿಲನಾಡು ಜಿಲ್ಲೆಯಾದ ವಿಜಯನಗರ ಜಿಲ್ಲೆಯ ಅನೇಕ ಕಡೆಗಳಲ್ಲಿ ಸೋನೆ ಮಳೆ ಸುರಿಯುತ್ತಿದೆ.

ಮಕ್ಕಳಲ್ಲಿ ಶೀತ ಬಾದೆ

ನಗರದಲ್ಲಿ ಜ್ವರ, ಶೀತ, ಕೆಮ್ಮು, ಕಫ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ವರದಿ ಆಗುತ್ತಿದೆ. ಅದರಲ್ಲಿಯೂ ಮಕ್ಕಳಲ್ಲಿ ಜ್ವರ, ಕೆಮ್ಮು ಕಾಣಿಸುತ್ತಿರುವುದು ಪೋಷಕರಲ್ಲಿ ಆತಂತಕಕ್ಕೆ ಕಾರಣವಾಗಿದೆ. ಆದರೆ, ಇದು ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಕಾಣಿಸಿಕೊಳ್ಳುತ್ತಿರುವ ಕಾಯಿಲೆ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ನಗರದ ಬಹುತೇಕ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಜ್ವರ, ಶೀತದ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ.

ಜಿಲ್ಲೆಯಲ್ಲಿ ಬದಲಾದ ವಾತವರಣದಿಂದ ಮಕ್ಕಳು ಸೇರಿದಂತೆ ಹಲವರಿಗೆ ಜ್ವರ, ಕೆಮ್ಮು ಕಾಣಿಸುತ್ತಿದೆ. ಆತಂತಕ ಪಡುವ ಅವಶ್ಯಕತೆಯಿಲ್ಲ. ಮಕ್ಕಳು ಹಾಗೂ ವಯ್ಯಸು ಆದವರಿಗೆ ಕಡೆ ಗಮನ ಹರಿಒಸಬೇಕು. ನಿರ್ಲಕ್ಷö್ಯ ಮಾಡದೇ ವೈದ್ಯರ ಸಲಹೆ ಪಡೆಯಬೇಕು. - ಡಾ.ಶಂಕರ್‌ನಾಯ್ಕ, ಡಿಎಚ್‌ಒ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net