ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾಳೆ ಪ್ರತಿಭಟನೆ

news
ಬಂಗಾರು ಹನುಮಂತು
Published on

ಹೊಸಪೇಟೆ: ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣದ ಜತೆ ಕೇಂದ್ರ ಸರ್ಕಾರದ 83 ಕೋಟಿ ರೂ ಹಣ ದುರಬಳಿಕೆಯಾಗಿರುವುದು ಬೆಳಕಿಗೆ ಬಂದಿದೆ. ಈ ಎರಡೂ ಪ್ರಕರಣಗಳ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಜೂ.28 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದಲ್ಲಿ ನಡೆದ ಅವ್ಯವಹಾರ ಬಗ್ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಸರ್ಕಾರದ ಹಸ್ತಕ್ಷೇಪವಿಲ್ಲದೇ ಇಷ್ಟೊಂದು ದೊಡ್ಡ ಆರ್ಥಿಕ ಅವ್ಯವಹಾರದ ನಡೆಯುವುದು ಸಾಧ್ಯವಿಲ್ಲ. ಈ ಹಣ ಲೋಕಸಭಾ ಚುನಾವಣೆ ವೆಚ್ಚಕ್ಕೆ ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಚಂದ್ರಶೇಖರ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಸಚಿವರ ಮೌಕಿಕ ಆದೇಶದಂತೆ ಅವ್ಯವಹಾರ ನಡೆದಿದೆ ಎಂದು ನಮೂದಾಗಿದೆ. ಕೇವಲ ನಾಗೇಂದ್ರ ಅಲ್ಲ ಇನಷ್ಟು ಸಚಿವರ ಹಸ್ತಕ್ಷೇಪ ಇರುವ ಬಗ್ಗೆ ಅನುಮಾನವಿದೆ ಎಂದು ಆರೋಪಿಸಿದರು.

ಅನ್ಯಾಯಕ್ಕೊಳಗಾಗಿರುವ ಎಸ್‌ಟಿ ಸಮುದಾಯಕ್ಕೆ ನ್ಯಾಯ ಒದಗಿಸುವವರು ಯಾರು? ಈ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು. ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಮುಖರಾದ ಅಶೋಕ್ ಜೀರೆ, ಅಯ್ಯಾಳಿ ತಿಮ್ಮಪ್ಪ, ಶಂಕರ್ ಮೇಟಿ, ಜಗದೀಶ್ ಕಮಟಗಿ, ದ್ವಾರಕೇಶ್ ಗುಜ್ಜಲ ಕಿರಣ್, ಚಂದ್ರು ದೇವಲಾಪುರ, ಅನುರಾಧ ಜೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net