ಆರು ತಿಂಗಳೊಳಗೆ ನಿವೇಶದ ಜತೆ ಮನೆ ನಿರ್ಮಾಣ

NEWS
ಹೊಸಪೇಟೆಯಲ್ಲಿ ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ.ವೆAಕಟೇಶನ್ ಪೌರಕಾರ್ಮಿಕರ ಮನೆಗಳಿಗೆ ಭೇಟಿ ನೀಡಿದರು.
Published on

ಹೊಸಪೇಟೆ: ನೀವೇಶಯಿಲ್ಲದ ಪೌರಾಕಾರ್ಮಿಕರಿಗೆ ಆರು ತಿಂಗಳೊಳಗೆ ನಿವೇಶನ ಗುರುತಿಸಿ, ಮನೆ ಕಟ್ಟಿಸಿಕೊಡಿಸಲಾಗುತ್ತದೆ ಎಂದು ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೌರ ಕಾರ್ಮಿಕರು, ಹೊರಗುತ್ತಿಗೆ ನೌಕರರು, ಹೊರಗುತ್ತಿಗೆ ಏಜೆನ್ಸಿಗಳ ಮಾಲೀಕರೊಂದಿಗೆ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಏಜೆನ್ಸಿಗಳ ಮಾಲೀಕರನ್ನು ಹೊರಗೆ ಕಳುಹಿಸಿ ಪೌರಕಾರ್ಮಿಕರ ಬೇಡಿಕೆಗಳನ್ನು ಆಲಿಸಿದರು. ಶೂ, ರೈನ್ ಕೋಟ್ ಕೊಟ್ಟಿದ್ದಾರೆಯೇ? ಸಂಬಳ ನಿಗದಿತ ಸಮಯಕ್ಕೆ ಬರುತ್ತಿದೆಯೇ? ಉಪಾಹಾರ ನೀಡಲಾಗುತ್ತಿದೆಯೇ? ಆರೋಗ್ಯ ವಿಮೆ ಮಾಡಿಸಲಾಗಿದೆಯೇ ಎಂದು ಹಲವು ಪ್ರಶ್ನೆಗಳನ್ನು ಕಾರ್ಮಿಕರಿಗೆ ಕೇಳಿದರು. ನಿಮ್ಮ ಸಮಸ್ಯೆಗಳನ್ನು ಹೇಳಿ ಎಂದು ಕೇಳಿದಾಗ, ಪೌರ ಕಾರ್ಮಿಕ ಮಹಿಳೆಯೊಬ್ಬರು ವಸತಿ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳೊಂದಿಗೆ ಅಧಿಕಾರಿಗಳ ಗಮನ ಸೆಳೆದರು.

ಅದಕ್ಕೆ ಸ್ಪಂದಿಸಿದ ಜಿಲ್ಲಾ ನಗರ ಯೋಜನಾ ನಿರ್ದೇಶಕ ಮನೋಹರ್, ಈ ಹಿಂದೆ ನಾನು ಪೌರಾಯುಕ್ತನಾಗಿದ್ದಾಗ ಈ ಕುರಿತು ಯೋಜನೆ ರೂಪಿಸಿದ್ದೇನೆ. ಆದರೆ, ವರ್ಗಾವಣೆ ಆಗಿದ್ದಕ್ಕೆ ಯೋಜನೆ ಸ್ವಲ್ಪ ವಿಳಂಬವಾಗಿದೆ. ಆದಷ್ಟು ಬೇಗ ನಿವೇಶನದಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದರು.

ಆಯೋಗದ ಅಧ್ಯಕ್ಷ ಎಂ.ವೆAಕಟೇಶನ್, ನಿವೇಶನ ಸಿಕ್ಕಿದ್ದರೆ ಈ ಬಗ್ಗೆ ತಮಗೆ ಆರು ತಿಂಗಳೊಳಗೆ ಪತ್ರ ಬರೆದು ತಿಳಿಸಬೇಕು. ಸಿಗದಿದ್ದರೂ ತಿಳಿಸಬೇಕು. ಒಂದೂವರೆ ವರ್ಷದೊಳಗೆ ಮನೆ ಆಗದಿದ್ದರೆ ತಿಳಿಸಬೇಕು ಎಂದು ಸೂಚಿಸಿದರು.

ಪೌರ ಕಾರ್ಮಿಕರಿಗಾಗಿ ಆರೋಗ್ಯ ಶಿಬಿರಗಳನ್ನು ನಡೆಸಬೇಕು, ರಾಷ್ಟ್ರೀಯ ರಜಾ ದಿನಗಳಂದು ಕೆಲಸ ಮಾಡಿದ್ದಕ್ಕೆ ದುಪ್ಪಟ್ಟು ಸಂಬಳ ನೀಡಬೇಕು, ವಾರಕ್ಕೆ ಒಂದು ದಿನ ರಜೆ ಇರುವಂತೆ ವ್ಯವಸ್ಥೆ ಮಾಡಬೇಕು ಎಂದು ಹೊರಗುತ್ತಿಗೆ ಏಜೆನ್ಸಿ ಮಾಲೀಕರಿಗೆ ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರಿಗೆ ತಾಕೀತು ಮಾಡಿದರು.

ನಮ್ಮ ಮಕ್ಕಳು ಸಹ ಸಫಾಯಿ ಕರ್ಮಚಾರಿಗಳಾಗಿ ಮುಂದುವರಿಯಬಾರದು ಎಂಬ ಸಂಕಲ್ಪವನ್ನು ನೀವೆಲ್ಲ ಮಾಡಬೇಕು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರು ಬೇರೆ ಉದ್ಯೋಗಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸರ್ಕಾರದ ಸೌಲಭ್ಯ ಬಳಸಿಕೊಂಡು ಮಕ್ಕಳನ್ನು ಓದಿಸಿ ಅವರನ್ನು ಬೇರೆ ವೃತ್ತಿಗೆ ಕಳುಹಿಸಬೇಕೇ ಹೊರತು ನಿಮ್ಮಂತೆ ಪೌರಕಾರ್ಮಿಕರಾಗಿ, ಕಸ ಎತ್ತುವ ವೃತ್ತಿ ಮಾಡದಂತೆ ನೋಡಿಕೊಳ್ಳಿ ಎಂದು ಪೌರಾಕಾರ್ಮಿಕರಿಗೆ ಕಿವಿಮಾತು ಹೇಳಿದರು.

30 ಲಕ್ಷ ರೂ.ಗೆ ಹೆಚ್ಚಿಸಿ:

ಸಫಾಯಿ ಕರ್ಮಚಾರಿಗಳ ವಿಚಾರದಲ್ಲಿ ರಾಷ್ಟ್ರೀಯ ನೀತಿ ರೂಪಿಸಬೇಕು, ಸಫಾಯಿ ಕರ್ಮಚಾರಿಗಳ ಸಮೀಕ್ಷೆ ನಡೆಸಬೇಕು. ನಿವೇಶನ, ಮನೆ ಒದಗಿಸಬೇಕು, ಪುನರ್ವಸತಿ ಪ್ಯಾಕೇಜ್‌ಗೆ ನೀಡುವ ಮೊತ್ತವನ್ನು 10 ಲಕ್ಷ ರೂಪಾಯಿಗಳಿಂದ 30 ಲಕ್ಷ ರೂಪಾಯಿ ವರೆಗೆ ಹೆಚ್ಚಿಸಬೇಕು. ಕೇವಲ ನಗರ ಪ್ರದೇಶಗಳ ಪೌರ ಕಾರ್ಮಿಕರ ಅಹವಾಲು ಆಲಿಸಿದರೆ ಸಾಲದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಫಾಯಿ ಕರ್ಮಚಾರಿಗಳ ಕಷ್ಟವನ್ನೂ ಆಲಿಸುವ ಕೆಲಸ ಆಯೋಗದಿಂದ ನಡೆಯಬೇಕು, ಹಾಗಿದ್ದರೆ ಮಾತ್ರ ಎಲ್ಲ ಸಫಾಯಿ ಕರ್ಮಚಾರಿಗಳ ಜೀವನ ಸುಗಮವಾಗಬಹುದು ಎಂದು ಪೌರಾಕಾರ್ಮಿಕರು ಒತ್ತಾಯಿಸಿದರು.

ಕನ್ನಡಕ್ಕೆ ಅನುವಾದ:

ತಮಿಳು ಮತ್ತು ಹಿಂದಿಯಲ್ಲಿ ಮಾತ್ರ ಮಾತನಾಡುತ್ತಿದ್ದ ಆಯೋಗದ ಅಧ್ಯಕ್ಷ ವೆಂಕಟೇಶನ್ ಮಾತನ್ನು ಕನ್ನಡಕ್ಕೆ ಅನವಾದಿಸುವ ಕೆಲಸ ಕಾರ್ಯಕ್ರಮದಲ್ಲಿ ನಡೆಯಿತು. ಅಧ್ಯಕ್ಷರು ತಮ್ಮ ಫೋನ್ ನಂಬರ್ ಅನ್ನು ಎಲ್ಲರಿಗೂ ಕೊಟ್ಟು, ಅಗತ್ಯ ಇದ್ದರೆ ಕರೆ ಮಾಡಿ ಕಷ್ಟ ಹೇಳಿಕೊಳ್ಳಬಹುದು ಎಂದು ಸೂಚಿಸಿದರು.

ನಗರ ಪ್ರದರ್ಶನ

ಶುಕ್ರವಾರ ಬೆಳಗ್ಗೆ ಸಭೆ ನಡೆಸುವುದಕ್ಕೆ ಮುನ್ನ ನಗರದ ಅಂಬೇಡ್ಕರ್ ವೃತ್ತ ಸಮೀಪದ ಇಂದಿರಾನಗರ, ಶಾಂತಿನಗರ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಪೌರಕಾರ್ಮಿಕರು ವಾಸಿಸುತ್ತಿರುವ ಪ್ರದೇಶ, ಅವರ ವಸತಿ ಸಮಸ್ಯೆಗಳನ್ನು ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ.ವೆAಕಟೇಶನ್ ಆಲಿಸಿದರು. ಮಳೆ ಬಿರುಸಿನಿಂದ ಸುರಿದಾಗ ಅವರ ಮನೆಗಳಿಗೆ ನೀರು ನುಗ್ಗುತ್ತಿರುವ ಸಮಸ್ಯೆ ಸಹಿತ ಪೌರಕಾರ್ಮಿಕರು ಎದುರಿಸುತ್ತಿರುವ ಇತರ ಹಲವು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನಮಗೆ ಕೇವಲ ಮನೆ ಕಟ್ಟಿಕೊಡುವ ಭರವಸೆ ನೀಡಲಾಗುತ್ತಿದೆ. ಆದರೆ ಮನೆಯೂ ಇಲ್ಲ, ನಿವೇಶನವೂ ಇಲ್ಲ. ದಯವಿಟ್ಟು ಅದನ್ನು ಮಾಡಿಕೊಡಿ ಎಂದು ಹಲವು ಪೌರ ಕಾರ್ಮಿಕರು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net